ತುಮಕೂರು: ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ವತಿಯಿಂದ ನೋಟಿಸ್ ನೀಡಿರುವುದಕ್ಕೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸುವ ಜನಪ್ರತಿನಿಧಿಗಳನ್ನು ಎಲ್ಲೋ ಒಂದು ಕಡೆ ಹತ್ತಿಕ್ಕುವ ಪ್ರಯತ್ನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಡೆಯುತ್ತಿದೆ ಎಂದರು.
ಯತ್ನಾಳ್ ಈ ಹೋರಾಟಕ್ಕೆ ಚಾಲನೆ ನೀಡಿದ್ದರು. ಯತ್ನಾಳ್ ಮೊದಲ ಬಾರಿಗೆ ವಿಧಾನಸೌಧದಲ್ಲಿ ನಮ್ಮ ಸಮಾಜ ಹಾಗೂ ಹಾಲುಮತ, ವಾಲ್ಮೀಕಿ ಸಮಾಜದ ಬಗ್ಗೆ ಗುಡುಗಿದ್ದರು. ನಾನು ಕೇಂದ್ರದ ವರಿಷ್ಠರಿಗೆ ಮನವಿ ಮಾಡ್ತೀನಿ ಕೂಡಲೇ ಮರುಪರಿಶೀಲನೆ ಮಾಡಿ ನೋಟಿಸ್ ವಾಪಸ್ ಪಡೆಯಬೇಕು ಎಂದರು.
ಕೆಲವೊಂದು ಬಿಜೆಪಿ ಮುಖಂಡರ ಒಳ ಪಿತೂರಿಯಿಂದಾಗಿ ಈ ಹೋರಾಟ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಅದರಲ್ಲೂ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ ಅವರನ್ನು ಹತ್ತಿಕ್ಕಿದರೆ ಹೋರಾಟ ನಿಲ್ಲುವ ಭ್ರಮೆಯಲ್ಲಿ ಇದ್ದಾರೆ ಎಂದರು.
ಯಾರು ಏನೇ ಮಾಡಿದರೂ ಹೋರಾಟ ನಿಲ್ಲುವುದಿಲ್ಲ. ನೀವು ಕನಸು ಕಂಡಿದಿರಾ, ಹೋರಾಟ ನಿಲ್ಲಿಸಬೇಕು ಅಂತಾ. ಇದ್ರಿಂದ ಸಭೆ ಮಾಡಿಸೋದು ಬೇರೆಯವರ ಮೂಲಕ ಹೇಳಿಕೆ ನೀಡಿಸೋದು ಮಾಡುತ್ತಿದ್ದೀರಾ. ಮೊದಲ ಹಂತವಾಗಿ ಯತ್ನಾಳ್ಗೆ ನೋಟಿಸ್ ನೀಡಿದ್ದೀರಾ. ಇಡೀ ಸಮಾಜ ಹಾಗೂ ನಾವು ಯತ್ನಾಳ್ ಅವರ ಜೊತೆಗಿದ್ದೇವೆ ಎಂದು ಎಚ್ಚರಿಕೆ ರವಾನಿಸಿದರು.
ಓದಿ: ಮೀಸಲಾತಿ ಘೋಷಣೆ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ: ವಿಜಯಾನಂದ ಕಾಶಪ್ಪನವರ
ಪಂಚಮಸಾಲಿ, ಹಾಲುಮತರಿಗೆ ಮೀಸಲಾತಿ ನೀಡಿ ಅಂತಾ ಹೇಳಿದ್ದಾರೆ, ಹೇಳಿದ್ದು ತಪ್ಪಾ. ಅನೇಕ ಸಮುದಾಯದ ಹೋರಾಟದಲ್ಲಿ ನಿಮ್ಮ ಸಚಿವರು ಭಾಗಿಯಾಗಿದ್ದಾರೆ ಅವರಿಗೆ ನೀಡದ ನೋಟಿಸ್ ಇವರಿಗೆ ಯಾಕೆ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ನೋಟಿಸ್ ವಿಚಾರವಾಗಿ ಬಿಜೆಪಿ ಮುಖಂಡರ ಸುಪುತ್ರರ ಕೈವಾಡ ಇದೆ. ಕೂಡಲೇ ನೋಟಿಸ್ ವಾಪಸ್ ಪಡೆಯಬೇಕು ಇಲ್ಲಾಂದ್ರೆ ಮೊನ್ನೆ ನಿಮ್ಮಗಳ ಮಾತಿಗೆ ಬೆಲೆ ಕೊಟ್ಟು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಿಲ್ಲಿಸಿದ್ದೇವೆ. ನೋಟಿಸ್ ವಾಪಸ್ ಪಡೆಯಲಿಲ್ಲ ಅಂದರೆ ಸಮಾವೇಶ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಮುತ್ತಿಗೆ ಹಾಕೋದು ಶತಸಿದ್ಧ ಎಂದು ಎಚ್ಚರಿಕೆ ನೀಡಿದರು.