ತುಮಕೂರು : ಆರು ತಿಂಗಳ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ತಾಲೂಕು ದೊಡ್ಡ ಸಾರಂಗಿ ಪಾಳ್ಯ ಗ್ರಾಮದಲ್ಲಿ ನಡೆದಿದೆ.
![New married Woman commit suicide](https://etvbharatimages.akamaized.net/etvbharat/prod-images/7462970_66_7462970_1591194414717.png)
![New married Woman commit suicide](https://etvbharatimages.akamaized.net/etvbharat/prod-images/7462970_1098_7462970_1591194445366.png)
ಗೌರಮ್ಮ ಆತ್ಮಹತ್ಯೆಗೆ ಶರಣಾದ ಮಹಿಳೆ. ಆರು ತಿಂಗಳ ಹಿಂದೆ ಸಿಆರ್ಪಿಎಫ್ನಲ್ಲಿ ಕೆಲಸ ಮಾಡುತ್ತಿದ್ದ ರವೀಶ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಕೊರೊನಾ ಹಿನ್ನೆಲೆ 3 ತಿಂಗಳ ಹಿಂದೆ ರವೀಶ್ ಮನೆಗೆ ಬಂದಿದ್ದರು. ಆದರೆ, ಜೂನ್ 2ರಂದು ಗೌರಮ್ಮ ಆತ್ಮಹತ್ಯೆ ಮಾಡಿಕೊಂಡಿರೋ ಬಗ್ಗೆ ಪೋಷಕರಿಗೆ ವಿಷಯ ತಿಳಿದಿದೆ. ತಕ್ಷಣ ಸ್ಥಳಕ್ಕೆ ಬಂದ ಪೋಷಕರು ಮಗಳು ಗೌರಮ್ಮ ಆತ್ಮಹತ್ಯೆ ಮಾಡಿಕೊಳ್ಳಲು ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ.
ಆಕೆಯ ಗಂಡ, ಅತ್ತೆ, ಮೈದುನ ಸೇರಿ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಕಿರುಕುಳ ನೀಡಿದ್ದಾರೆ. ನಮ್ಮ ಮಗಳು ಯಾವುದೇ ಕಾರಣಕ್ಕೂ ಪ್ರಾಣ ಕಳೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿ ಹೊಂದಿರಲಿಲ್ಲ. ಹೀಗಾಗಿ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.