ತುಮಕೂರು: ಭೂ ವಿವಾದದ ಆರೋಪ ಎದುರಿಸುತ್ತಿರುವ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಶ್ರೀಗಳಿಗೆ ಶಿರಾ ನ್ಯಾಯಾಲಯ ಜಾಮೀನು ನೀಡಿದೆ.
ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠಕ್ಕೆ ಸೇರಿದ್ದ 250 ಎಕರೆ ಜಮೀನಿನ ದಾಖಲೆಗಳನ್ನು ಸ್ವಾಮೀಜಿ ತಿರುಚಿದ್ದಾರೆಂದು ಆರೋಪಿಸಿ ಮಠದ ವಂಶಸ್ಥ ಕೃಷ್ಣಪ್ಪ ಶಿರಾ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು.
ಶಿರಾ ನ್ಯಾಯಾಲಯವು ಸ್ವಾಮೀಜಿ ಮತ್ತು 7 ಮಂದಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿತ್ತು. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸ್ವಾಮೀಜಿ ಮತ್ತು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್, ಶಿರಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಶಿರಾ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸುವಂತೆ ಆದೇಶಿಸಿತ್ತು.
ಬಳಿಕ, ಸ್ವಾಮೀಜಿ ಶಿರಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಗೀತಾ, ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ನ್ಯಾಯಾಲಯವು, 50 ಸಾವಿರ ರೂ. ಮೊತ್ತದ ಬಾಂಡ್ ಹಾಗೂ ಒಬ್ಬ ಜಾಮೀನುದಾರನು ನೀಡುವಂತೆ ಸೂಚಿಸಿ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದೆ. ಕೃಷ್ಣಪ್ಪ ಪರ ತುಮಕೂರು ವಕೀಲರಾದ ಟಿ.ಎಸ್. ರವಿ ವಾದ ಮಂಡಿಸಿದ್ದರು.