ತುಮಕೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಜಿಲ್ಲೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ಎರಡು- ಮೂರು ಬಾರಿ ಗೆದ್ದು ಬಂದ ಶಾಸಕರು ಯಾಕೆ ಇಂತಹ ಕಾರ್ಯಕ್ರಮಗಳನ್ನು ನಡೆಸಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ತಿಪಟೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಉತ್ತಮ ಕೆಲಸ ಮಾಡುವಾಗ ಯಾರೂ ಅಡ್ಡಿ ಮಾಡಬಾರದು. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇರಬೇಕು. ಜಿಲ್ಲೆಯ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿರುತ್ತದೆ. ಅವರಿಗೆ ಮಾತ್ರವೇ ನ್ಯಾಯಾಂಗ ಮತ್ತು ಕಾರ್ಯಾಂಗದ ಅಧಿಕಾರವಿದೆ. ಜಿಲ್ಲೆಯಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ಜಿಲ್ಲಾಡಳಿತವನ್ನು ಹೊಣೆಗಾರಿಕೆಯನ್ನಾಗಿ ಮಾಡುತ್ತೇವೆ. ಜಿಲ್ಲಾಧಿಕಾರಿಗೆ ಅಷ್ಟು ದೊಡ್ಡ ಜವಾಬ್ದಾರಿ ಕೊಟ್ಟಿರುವಾಗ ಅದನ್ನು ನಿರ್ವಹಣೆ ಮಾಡುವ ವೇಳೆ ಯಾವುದೇ ಜನಪ್ರತಿನಿಧಿ ಅಡ್ಡಿಪಡಿಸಬಾರದು ಎಂದರು.
ನಮ್ಮ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುವ ಅಧಿಕಾರಿಗಳಿಗೆ ನಾವು ಬೆಂಬಲಿಸುತ್ತಾ ಬಂದಿದ್ದೇವೆ. ಹಿಂದೆ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಒಳ್ಳೆಯ ಕೆಲಸ ಮಾಡಿದ್ದರು. ಅವರಿಗೆ ಬೆಂಬಲಿಸಿದ್ದೇವು. ನಾನು ಮೋದಿ ಸರ್ಕಾರದ ಒಬ್ಬ ಪ್ರತಿನಿಧಿ. ಮೋದಿ ಅವರು ಗ್ರಾಮ ಪಂಚಾಯಿತಿ ಮಟ್ಟದಿಂದ ಸಂಸತ್ತಿನವರೆಗೆ ಯಾವ್ಯಾವ ಕೆಲಸ ಮಾಡಿದ್ದಾರೆ ಎಂಬುದರ ಮಾಹಿತಿ ನೀಡುತ್ತೇನೆ. ಅದರಾಚೆಗೆ ಈ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ. ನಾನು ಮೂಲತಃ ರಾಜಕಾರಣಿ ಅಲ್ಲ. ಒಬ್ಬ ಪತ್ರಕರ್ತ ಆಗಿದ್ದವನು. ಇವತ್ತು ನಾನು ರಾಜಕಾರಣದಲ್ಲಿ ಇರಬಹುದು, ಆದರೆ, ರಾಜಕಾರಣಿಯಾಗಿಲ್ಲ. ಸೈದ್ಧಾಂತಿಕ ವಿಚಾರ, ರಾಷ್ಟ್ರೀಯತೆ ಬಂದಾಗ ಮಾತ್ರವೇ ನನ್ನ ಅಭಿಪ್ರಾಯ ಹೇಳುತ್ತೇನೆ. ರಾಜ್ಯ ಸಚಿವ ಸಂಪುಟದ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.