ತುಮಕೂರು: ಹೆಚ್ಚಿನ ಜನರು ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯಕೀಯ ವ್ಯವಸ್ಥೆ ಇರಬೇಕು. ಜತೆಗೆ ಆಸ್ಪತ್ರೆ ಸಿಬ್ಬಂದಿ ಕೂಡ ಸೂಕ್ತ ಪ್ರಮಾಣದಲ್ಲಿರಬೇಕು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಿನೇ-ದಿನೇ ಹೆಚ್ಚಾಗಿ ಗರ್ಭಿಣಿಯರು ಚಿಕಿತ್ಸೆ ಪಡೆಯಲು ದಾಖಲಾಗುತ್ತಿದ್ದಾರೆ. ಕೊರೊನಾ ಸೋಂಕಿನ ಹರಡುವಿಕೆ ಭೀತಿ ನಡುವೆಯೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ಹಾಸಿಗೆಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದ್ದು, ಗರ್ಭಿಣಿಯರನ್ನು ನೋಡಿಕೊಳ್ಳಲು ಬರುವ ಸಂಬಂಧಿಕರಿಗೂ ಕೂಡ ಪೂರಕ ಸೌಲಭ್ಯದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪ್ರತಿ ತಿಂಗಳು ಸರಾಸರಿ 550 ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗುತ್ತಿದೆ. ಅದರಲ್ಲಿ 250 ಸಿಜೇರಿಯನ್ ಮತ್ತು 300 ನಾರ್ಮಲ್ ಡೆಲಿವರಿ ಮಾಡಲಾಗುತ್ತಿದೆ. ಕಳೆದೆರಡು ತಿಂಗಳಿನಿಂದ 20ರಷ್ಟು ಗರ್ಭಿಣಿಯರು ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಮತ್ತು ಅವರು ವೈಯಕ್ತಿಕವಾಗಿ ಆಹಾರದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: ಕೋವಿಡ್ ಪರೀಕ್ಷಾ ಕೇಂದ್ರಗಳ ನಿರಂತರ ಕಾರ್ಯ: ಬೆಣ್ಣೆನಗರಿಯ ಜನರಿಗಿಲ್ಲ ವೈದ್ಯಕೀಯ ಸೇವೆಯ ವ್ಯತ್ಯಯ
ಬಹುತೇಕ ಗರ್ಭಿಣಿಯರು ನಾರ್ಮಲ್ ಡೆಲಿವರಿಗೆ ಒತ್ತು ನೀಡುತ್ತಾರೆ. ವೈದ್ಯರು ಕೂಡ ಸೂಕ್ತ ಚಿಕಿತ್ಸೆಯ ನಂತರ ಈ ಕುರಿತಂತೆ ನಿರ್ಧರಿಸುತ್ತಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.