ತುಮಕೂರು : ಚುನಾವಣಾ ಕರ್ತವ್ಯಕ್ಕೆಂದು ಚೆಕ್ ಪೋಸ್ಟ್ನಲ್ಲಿ ನೇಮಿಸಲಾಗಿದ್ದ ಸ್ಪಾಟಿಕ್ ಸರ್ವೆಲೆನ್ಸ್ ತಂಡದ ಸಿಬ್ಬಂದಿಯೊಬ್ಬರು ವಾಹನ ತಪಾಸಣೆ ಮಾಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಹಿನ್ನೆಲೆ ಕೆಲಸದಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ತಿಪಟೂರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ ಇಂದ್ರಪ್ಪ ಅಮಾನತುಗೊಂಡ ಚುನಾವಣಾ ಕರ್ತವ್ಯ ಸಿಬ್ಬಂದಿ.
ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ ಬರುವ ತಿಪಟೂರು ವಿಧಾನಸಭಾ ಕ್ಷೇತ್ರದದಲ್ಲಿನ ಬಿದರೆಗುಡಿ ಚೆಕ್ ಪೋಸ್ಟ್ನಲ್ಲಿ ಕೆ ಇಂದ್ರಪ್ಪ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸ್ಪಾಟಿಕ್ ಸರ್ವೆಲೆನ್ಸ್ ತಂಡಕ್ಕೆ ಇವರನ್ನು ನೇಮಕ ಮಾಡಲಾಗಿತ್ತು . ಕೆಲಸ ನಿರ್ವಹಿಸುವ ವೇಳೆಯಲ್ಲಿ ನಿಯಮ ಬಾಹಿರವಾಗಿ ವಾಹನಗಳ ತಪಾಸಣಾ ಸಮಯದಲ್ಲಿ ವಾಹನ ಚಾಲಕರಿಂದ ಹಣ ಪಡೆಯುತ್ತಿರುವುದನ್ನು ಸಾರ್ವಜನಿಕರು ಚಿತ್ರೀಕರಿಸಿ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಕಳುಹಿಸಿದ್ದರು.
ಈ ವೀಡಿಯೊ ತುಣುಕನ್ನು ಪರಿಶೀಲಿಸಿದಾಗ ಬಿದರೆಗುಡಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಾಹನ ತಪಾಸಣೆ ಮಾಡುವ ಸಮಯದಲ್ಲಿ ಕೆ ಇಂದ್ರಪ್ಪ ವಾಹನ ಚಾಲಕರು ಮತ್ತು ಮಾಲೀಕರಿಂದ ಹಣ ಪಡೆಯುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಆದ್ದರಿಂದ ಅಧಿಕಾರಿಯು ಚುನಾವಣೆ ಕೆಲಸದಲ್ಲಿ ಕರ್ತವ್ಯಲೋಪ ಎಸಗಿರುವ ಮೇಲ್ನೋಟಕ್ಕೆ ಸ್ಪಷ್ಟವಾಗಿರುವುದರಿಂದ ಅವರ ಮೇಲೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಿರುವುದಾಗಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಮ್ಮ ಆದೇಶ ಪತ್ರದಲ್ಲಿ ನಮೂದಿಸಿದ್ದಾರೆ.