ತುಮಕೂರು: ಕೇಂದ್ರದಲ್ಲಿ 5 ವರ್ಷ ಆಡಳಿತ ನಡೆಸಿರುವ ನರೇಂದ್ರ ಮೋದಿ ದೇಶವನ್ನು ಅಸ್ಥಿರಗೊಳಿಸುವ ಮಾರ್ಗದಲ್ಲಿ ಆಡಳಿತ ನಡೆಸಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ದೇವೇಗೌಡ ಆರೋಪಿಸಿದ್ದಾರೆ.
ಅಂಬೇಡ್ಕರ್ ಜಯಂತಿ ಹಿನ್ನೆಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಜಾತ್ಯತೀತ ವ್ಯವಸ್ಥೆಯಲ್ಲಿ ನಂಬಿಕೆ ಇರುವಂತಹ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಸೇರಿದಂತೆ ಇನ್ನುಳಿದ ಪ್ರಾದೇಶಿಕ ಪಕ್ಷದವರಾದ ನಾವೆಲ್ಲ ಒಂದುಗೂಡಿ ಹೋರಾಟ ಮಾಡುವಂತಹ ಅವಶ್ಯಕತೆ ಇದೆ ಎಂದು ಕರೆ ನೀಡಿದರು.
ಪ್ರಾದೇಶಿಕ ಪಕ್ಷಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದು, ಅವೆಲ್ಲವನ್ನು ನಾನು ಗಮನಿಸಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನೊಂದಿಗೆ ಕೈಜೋಡಿಸಬೇಕಾಗಿದೆ ಎಂದು ದೇವೇಗೌಡ ಹೇಳಿದರು.
ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಮೋದಿಯನ್ನು ನಾವು ತಡೆಯಬೇಕಿದೆ. ನಾನು ಚುನಾವಣೆಗೆ ನಿಲ್ಲಬಾರದು ಅಂದುಕೊಂಡಿದ್ದೆ, ರಾಷ್ಟ್ರ ಮುಖಂಡರ ಸಲಹೆ ಮೇರೆಗೆ ಸ್ಪರ್ಧಿಸಿದ್ದೇನೆ ಎಂದರು.
ಬಿಜೆಪಿ ನಾಯಕರ ನಡವಳಿಕೆಗಳನ್ನು ಗಮನಿಸಿದ್ದೇನೆ, ಅವರಲ್ಲಿ ಅಸಮಾಧಾನವಿದೆ. ಆ ಪಕ್ಷದಲ್ಲಿ ಮೋದಿಯನ್ನು ಬಿಟ್ಟರೆ ಬೇರೆ ಯಾರ ಹೆಸರನ್ನು ಹೇಳುತ್ತಿಲ್ಲ. ಬಿಜೆಪಿ ವೇದಿಕೆಯಲ್ಲಿ ಹಿರಿಯ ನಾಯಕರಿದ್ದರೂ ಅವರ ಹೆಸರನ್ನು ಹೇಳಲು ಮೋದಿ ಮುಂದಾಗುವುದಿಲ್ಲ. ಇವರ ಈ ವರ್ತನೆ ನಿಜಕ್ಕೂ ಒಂದು ರೀತಿಯ ಅಪಾಯಕಾರಿಯಾದದ್ದು ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದರು.