ಶಿವಮೊಗ್ಗ : ಶಾಸಕ ಕೆ.ಎಸ್. ಈಶ್ವರಪ್ಪನವರು ತಮ್ಮ ಮಗನಿಗೆ ಟಿಕೆಟ್ ಕೇಳಬಹುದು. ಆದರೆ ನಾನು ನನಗೆ ಟಿಕೆಟ್ ಕೇಳಿದರೆ ತಪ್ಪೇ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನೆ ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯುಗಾದಿ ಶುಭಾಶಯ ಕೋರಿ ನಾನು ಫ್ಲೆಕ್ಸ್ ಹಾಕಿದ್ದೆ. ಅದು ನನ್ನ ನಿರೀಕ್ಷೆಗೂ ಮೀರಿ ತಲುಪಿದೆ. ನಗರದಲ್ಲಿ ಶಾಂತಿ ಬೇಕು ಎಂದು ಬಹಳಷ್ಟು ಜನ ಮಾತನಾಡಿದ್ದು, ಅದನ್ನು ಮುಂದುವರೆಸಿರಿ ಎಂದು ಹೇಳಿದ್ದಾರೆ. ಜನರ ಪ್ರತಿಕ್ರಿಯೆ ನೋಡಿ ನಾನು ಸರಿಯಾದ ಹೆಜ್ಜೆಯನ್ನಿಟ್ಟಿದ್ದೇನೆ ಎಂದು ಅನ್ನಿಸುತ್ತದೆ ಎಂದರು.
ಅದು ವಾಸ್ತವಿಕತೆಗೆ ಹತ್ತಿರವಾಗಿ ಜನರ ನಾಡಿ ಮಿಡಿತದ ಹಾಗು ಶಿವಮೊಗ್ಗ ನಗರದ ಸ್ವಾಸ್ಥ್ಯವನ್ನು ಕಾಪಾಡುವ ಫ್ಲೆಕ್ಸ್ ಆಗಿದೆ. ಅದು ಯಾವುದೇ ವ್ಯಕ್ತಿಗೆ ಅನ್ವಯವಾಗಲ್ಲ. ಅದು ಯಾರು ಮಾತನಾಡುತ್ತಾರೊ ಅವರಿಗೆ ಅನ್ವಯವಾಗಿದೆ ಎಂದು ಪರೋಕ್ಷವಾಗಿ ಈಶ್ವರಪ್ಪ ಬೆಂಬಲಿಗರಿಗೆ ಟಾಂಗ್ ನೀಡಿದರು. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರ ಅನುಭವಕ್ಕೆ ಬರಲಿ ಎಂದಾಗಿದೆ. ಶಿವಮೊಗ್ಗ ಶಾಂತವಾಗಿರುವುದು ಹಲವರಿಗೆ ಬೇಕಾಗಿದೆ. ಕೆಲವರ ಹಿತಾಸಕ್ತಿಗೆ ಶಿವಮೊಗ್ಗ ನಗರ ಸ್ಪಂದಿಸದೆ ಇರಲಿ. ಎಲ್ಲರ ನೆಮ್ಮದಿ ಕಲಕುವಂತದ್ದು ಆಗದಿರಲಿ. ನನಗೆ ಪಾಸಿಟಿವ್ ಆಗಿ ಬಂದಿರುವ ಪ್ರತಿಕ್ರಿಯೆಗೆ ಸ್ವಾಗತ ಮಾಡಿದ್ದೇನೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಶಾಂತಿಗಾಗಿ ಹಾಕಿರುವ ಫ್ಲೆಕ್ಸ್ಗೂ ಟೀಕೆ ಸರಿಯಲ್ಲ : ಯುಗಾದಿ ಹಬ್ಬದ ಶುಭಾಶಯ ಕೋರಿ ನಾನು ಹಾಕಿದ್ದ ಪ್ಲೇಕ್ಸ್ನಲ್ಲೂ ಮನರಂಜನೆ ಹುಡುಕಿದ್ದಾರೆ. ಅಂತಹ ಮನಸ್ಸಿಗೆ ಶಾಂತಿ ಕೋರುತ್ತೇನೆ. ಅಂತಹ ಮನಸ್ಸಿನವರನ್ನು ಹೊರಗಿಡಲು ಬಯಸುತ್ತೆನೆ ಎಂದರು. ಅವರ ಮಾಲೀಕರನ್ನು ಮೆಚ್ವಿಸುವ ಶ್ವಾನದ ರೀತಿ ವರ್ತಿಸುತ್ತಿದ್ದಾರೆ. ನನ್ನನ್ನು ಅಧಿಕಾರದ ನಿತ್ಯ ಸುಮಂಗಲಿ ಎಂದು ಕರೆದಿದ್ದಾರೆ. ಬಹುಶಃ ಅವರಿಗೆ ಆ ಪದದ ಅರ್ಥ ಗೊತ್ತಿಲ್ಲ ಎನಿಸುತ್ತದೆ ಇಂತವರಿಗೆ ನಾನು ಏನನ್ನು ಹೇಳುವುದಿಲ್ಲ ಎಂದು ಹೇಳಿದರು.
ಹೀಗೆ ಟೀಕೆ ಮಾಡುವವರಿಗೆ ಪಾಠ ಕಲಿಸುವ ಕೆಲಸವನ್ನು ಸಮಾಜ ಮಾಡಬೇಕಿದೆ. ನಾನು ಯಾರ ಹಿಂಬಾಲಕರು ಅಲ್ಲ. ನಾನು ವಿದ್ಯಾರ್ಥಿ ಜೀವನದಲ್ಲಿಯೇ ಒಂದು ವರ್ಷ ಜೈಲು ವಾಸ ಅನುಭವಿಸಿದ್ದೇನೆ. ನನ್ನಷ್ಟು ಸುದೀರ್ಘವಾದ ಜೈಲು ವಾಸವನ್ನೂ ಯಾರೂ ಅನುಭವಿಸಿಲ್ಲ. ಹೋರಾಟ ಮಾಡಿಕೊಂಡು ಬಂದ ನನಗೆ ನಿತ್ಯ ಸುಮಂಗಲಿ ಎಂದು ಇಂತಹ ಕೀಳು ಮಟ್ಟದ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಆಯನೂರು ಮಂಜುನಾಥ್ ಕಿಡಿಕಾರಿದರು.
ಪಕ್ಷ ನನಗೆ ಎಲ್ಲಾ ರೀತಿಯ ಅವಕಾಶ ನೀಡಿದೆ. ನಮ್ಮ ಪಕ್ಷ ಗೆಲ್ಲುವಂತಹ ಅವಕಾಶ ಇಲ್ಲದೆ ಇರುವಂತಹ ಹೊಸನಗರದಲ್ಲಿ ಪಕ್ಷದ ಬಾವುಟ ಹಾರಿಸಿದ್ದೇನೆ. ಪಕ್ಷದ ಮಧ್ಯಂತರ ಸೂಚನೆ ಮೇರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಂಗಾರಪ್ಪನವರ ವಿರುದ್ದ ಗೆಲವು ಸಾಧಿಸಿ ದೆಹಲಿಗೆ ಪಕ್ಷದ ಬಾವುಟ ತೆಗೆದುಕೊಂಡು ಹೋಗಿದ್ದೇನೆ. ನಾನು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ ಎಂದು ಪರೋಕ್ಷವಾಗಿ ಆಯನೂರು ಮಂಜುನಾಥ್, ಅವರು ಈಶ್ವರಪ್ಪಗೆ ಟಾಂಗ್ ಕೊಟ್ಟರು.
ನನಗೆ ಟಿಕೆಟ್ ಕೇಳಿದ್ದಕ್ಕೆ ಟೀಕೆ : ಐದು ಜಿಲ್ಲೆಗಳ ನಡುವೆ ಪದವಿಧರ ಕ್ಷೇತ್ರವನ್ನು ಪಕ್ಷದ ಸಹಕಾರದಿಂದ ಗೆದ್ದು ಬಂದಿದ್ದೇನೆ. ಇಂತಹ ನನಗೆ ಶಿವಮೊಗ್ಗದಲ್ಲಿ ಅವಕಾಶ ನೀಡಿ ಎಂದು ಹೇಳಿದ್ದಕ್ಕೆ ಕಾಮೆಂಟ್ ಮಾಡುತ್ತಿದ್ದಾರೆ. ನನ್ನಂತೆ ಈಶ್ವರಪ್ಪನವರಿಗೆ ಅವಕಾಶ ನೀಡಿದೆ. ಅವರಿಗೂ ಸಹ ಎಲ್ಲಾ ರೀತಿಯ ಅವಕಾಶ ನೀಡಿದೆ. ಅವರು ಶಾಸಕರಾಗಿ ಮಂತ್ರಿಯಾಗಿ, ಸೋತಾಗ ಬೋರ್ಡ್ ಅಧ್ಯಕ್ಷಗಿರಿ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿದೆ. ಈಶ್ವರಪ್ಪನವರು ತಮ್ಮ ಮಗನ ಹೆಸರು ಪ್ರಸ್ತಾಪ ಮಾಡಿದಾಗ ನಾನು ನನಗೆ ಕೇಳಿದ್ದಕ್ಕೆ ಟೀಕೆ ಬರುತ್ತಿವೆ. ಹಾಗಾದರೇ ನಾನು ನನ್ನ ಬದಲಿಗೆ ನನ್ನ ಮಗನಿಗೆ ಟೀಕೆಟ್ ಕೇಳಬೇಕಿತ್ತೆ ಎಂದ ಟೀಕಾಕರರಿಗೆ ತೀರುಗೇಟು ನೀಡಿದರು.
ನನ್ನ ಮೇಲೆ ಒಂದೇ ಒಂದು ಆರೋಪ ಇಲ್ಲ : ನನ್ನ ಮೇಲೆ ಒಂದೇ ಒಂದು ಅಪಾದನೆಯ ಕಪ್ಪು ಚುಕ್ಕೆಯನ್ನು ನಾನು ಹೊಂದಿಲ್ಲ. ನಮ್ಮ ಪಕ್ಷ ದುರ್ಬಲವಾಗಿಲ್ಲ. ಇದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಮಾಡಿದ ಅಪಮಾನ ಮಾಡಿದಂತೆ ಆಗಿದೆ. ಇದಕ್ಕಾಗಿಯೇ ನಾನು ರಂಗ ಪ್ರವೇಶ ಮಾಡಿದ್ದೇನೆ ಎಂದು ಆಯನೂರು ಮಂಜುನಾಥ್ ಸ್ಪಷ್ಟನೆ ನೀಡಿದರು. ಸದನದಲ್ಲಿ ಘಟಾನುಘಟಿಗಳ ನಡುವೆ ಉತ್ತಮ ಸಂಸದೀಯ ಪಟು ಎಂದು ಪ್ರಶಸ್ತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಲೋಕಸಭ ಸದಸ್ಯನಾಗಿ ಕೇವಲ, 13 ತಿಂಗಳಲ್ಲಿ ಹೈವೆಗಳನ್ನು ತಂದಿದ್ದೇನೆ. ತುಮಕೂರು- ಹೂನ್ನಾವಾರ, ಚಿತ್ರದುರ್ಗ- ತೀರ್ಥಹಳ್ಳಿ ರಸ್ತೆ ಆಗಿದೆ. ಮಲೆನಾಡಿನಲ್ಲಿ ಫೋನ್ ಸರಿಪಡಿಸಿ, ರೈಲ್ವೆಯಲ್ಲಿ ಮಲೆನಾಡಿಗೆ ಮೊದಲ ಬಾರಿಗೆ ಕಂಪ್ಯೂಟರೈಸ್ಡ್ ಮಾಡಿಸಿದ್ದೆ. ವಿಐಎಸ್ಎಲ್ ಸೈಲ್ಗೆ ಸೇರ್ಪಡೆಯಾಗಿದ್ದು ನನ್ನ ಅವಧಿಯಲ್ಲಿ. ನನ್ನನ್ನು ಟೀಕೆ ಮಾಡುವವರು ನನ್ನ ಇತಿಹಾಸವನ್ನು ನೋಡಿ ಮಾತನಾಡಲಿ ಎಂದು ಆಯನೂರು ಗುಡುಗಿದರು.
ಪರಿಷತ್ನಲ್ಲೂ ಸಹ ನಾನು ಎಲ್ಲಾ ವರ್ಗದವರ ಪರವಾಗಿ ಹೋರಾಟ ನಡೆಸಿದ್ದೇನೆ. ನನ್ನ ಸರ್ಕಾರ ಇದ್ದಾಗಲೂ ಒಳ್ಳೇಯ ಕೆಲಸಕ್ಕಾಗಿ ಹೋರಾಟ ಮಾಡಿದ್ದಾನೆ. ಬಿಸ್ಕೆಟ್ಗಾಗಿ ಹೋರಾಟ ನಡೆಸುವವರಿಗೆ ನಾನು ಉತ್ತರ ಕೊಡಬೇಕಿಲ್ಲ. ಅತ್ಯಂತ ಆಶ್ಲೀಲವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗದ ಶಾಸಕ ಸ್ಥಾನ ಬೇಕು : ನರೇಂದ್ರ ಮೋದಿ ಅವರು ಹೇಳಿದ ಮಾತನ್ನು ಪಾಲಿಸುವುದು ನಮ್ಮ ಕರ್ತವ್ಯ. ಮೋದಿ ಹೇಳಿಕೆಗೆ ವಿರುದ್ಧವಾಗಿ ಮಾತನಾಡುವುದನ್ನು ಸರಿಪಡಿಸಬೇಕಲ್ಲವೆ. ಆರ್ಎಸ್ಎಸ್ ಸರಸಂಘಚಾಲಕರು ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಬೇಡಿ ಎಂದು ಹೇಳಿದ್ದಾರೆ. ಈ ಭಾರಿ ನಾನು ಶಿವಮೊಗ್ಗ ಕ್ಷೇತ್ರದ ಆಕಾಂಕ್ಷಿಯಾಗಿದ್ದು ಪಕ್ಷದಿಂದ ಸ್ಪರ್ಧೆಗೆ ಅವಕಾಶ ನೀಡುವ ಭರಸವೆ ಇದೆ. ಶಾಂತಿಪ್ರಿಯ ಪ್ರತಿನಿಧಿಯಾಗಿ, ದುಡಿದು ತಿನ್ನುವವರ ಪ್ರತಿನಿಧಿಯಾಗಿ ಸ್ಪರ್ಧೆ ಬಯಸುತ್ತೇನೆ. ನನಗೆ ಮಂತ್ರಿಗಿರಿ ಬೇಡ. ನನಗೆ ಶಿವಮೊಗ್ಗದ ಶಾಸಕ ಸ್ಥಾನ ಬೇಕು ಅಷ್ಟೇ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಯಾವುದೇ ಆಫರ್ ಬಂದಿಲ್ಲವೆಂದು ಆಯನೂರು ಮಂಜುನಾಥ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ :ನಮ್ಮೂರಿಗೆ ಉರಿನೂ ಬೇಡ, ನಂಜು ಬೇಡ: ಆಯನೂರು ಮಂಜುನಾಥ್