ತುಮಕೂರು: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ವಿಪ್ ಉಲ್ಲಂಘಿಸಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಇದೀಗ ವಿಧಾನ ಪರಿಷತ್ ಸದಸ್ಯ ಶರವಣ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲೆಲ್ಲೋ ಹೆಣ್ಣು ಮಕ್ಕಳಿಗೆ ಚಿನ್ನದ ಚೈನ್ ಕೊಟ್ಟು ಎಂಎಲ್ಸಿ ಆಗಿರುವ ಶರವಣನಿಗೆ ಒಂದು ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ಗೆಲ್ಲುವ ಯೋಗ್ಯತೆ ಇಲ್ಲ ಎಂದು ಶಾಸಕ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಶರವಣ ವಾಸ ಮಾಡುತ್ತಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿ. ಚಿನ್ನ ಕೊಟ್ಟು ಅಧಿಕಾರಕ್ಕೆ ಬರುವವರು, ಎಂತೆಂಥವರೋ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಇದು ಪಕ್ಷದ ದೌರ್ಬಲ್ಯವಾಗಿದೆ. ಚಿನ್ನ ಕೊಟ್ಟು ಅಧಿಕಾರ ಹಿಡಿಯುವ ಶರವಣ ಏನು ರೈತನೇ, ಜೆಡಿಎಸ್ ರೈತರ ಪಕ್ಷವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ದೂದ್ ಪೇಡಾ ದಿಗಂತ್ ಕುತ್ತಿಗೆ ಭಾಗಕ್ಕೆ ಆಪರೇಷನ್, ಯಾವುದೇ ಅಪಾಯವಿಲ್ಲ ಎಂದ ವೈದ್ಯರು
ರಾಜ್ಯಸಭೆ ಸದಸ್ಯರನ್ನಾಗಿ ಅನ್ಯರಾಜ್ಯದ ರಾಮಸ್ವಾಮಿ ಎಂಬುವರನ್ನು ಜೆಡಿಎಸ್ ಪಕ್ಷ ಆಯ್ಕೆ ಮಾಡಿತ್ತು. ಈ ಬಾರಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿತ್ತು. ಕುಪೇಂದ್ರ ರೆಡ್ಡಿ ಏನು ರೈತರೇ? ಅದೇ ರೀತಿ ಮಂಗಳೂರಿನ ಫಾರೂಕ್ ರನ್ನು ಹಿಂದೆ ರಾಜ್ಯಸಭೆಯ ಸ್ಥಾನಕ್ಕಾಗಿ ಜೆಡಿಎಸ್ ಪಕ್ಷ ಕಣಕ್ಕಿಳಿಸಿತ್ತು, ಅವರೇನು ರೈತರೇ ಎಂದು ಪ್ರಶ್ನಿಸಿದರು. ಅಲ್ಲದೇ ಜೆಡಿಎಸ್ ಪಕ್ಷವೇನು ರೈತರ ಪಕ್ಷವೇ, ಕಾರ್ಯಕರ್ತರ ಪಕ್ಷವೇ ಎಂದು ಶಾಸಕ ಶ್ರೀನಿವಾಸ್ ಹರಿಹಾಯ್ದರು.