ತುಮಕೂರು: ಮಹಿಳೆಯರಲ್ಲಿ ಧೈರ್ಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿನೂತನವಾದ 'ಮಿಷನ್ ಸಾಹಸಿ' ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನುರಿತ ಕರಾಟೆ ಪಟುಗಳಿಂದ ತರಬೇತಿ ಪಡೆದಿದ್ದ ಕರಾಟೆಯ ಪ್ರದರ್ಶನ ಮಾಡಿದರು. ಜೊತೆಗೆ ವಿದ್ಯಾರ್ಥಿನಿಯರಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಬಗೆ, ಯಾರು ಇರದ ಜನನಿಬಿಡ ಪ್ರದೇಶಗಳಲ್ಲಿ ಹಲ್ಲೆಗೆ ಮುಂದಾಗುವ ಪುರುಷರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಮಾರ್ಗದರ್ಶನ ನೀಡಲಾಯಿತು. ಇದೇ ವೇಳೆ ಕರಾಟೆ ಕರಗತಗೊಳಿಸಿಕೊಂಡಿರುವ ಕೆಲ ಕರಾಟೆ ಪಟುಗಳು ತಮ್ಮ ಸಾಹಸಮಯ ಕಲೆ ಪ್ರದರ್ಶಿಸುವ ಮೂಲಕ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಿಷನ್ ಸಾಹಸಿ ಕಾರ್ಯಕ್ರಮಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲಲಿತಾ ಕುಮಾರಿ ಆಗಮಿಸಿ ಉದ್ಘಾಟನೆ ನೆರವೇರಿಸಿದರು. ಅನಂತರ ಅವರು ಮಾತನಾಡಿ, ಮಹಿಳೆಯರನ್ನು ಭಾರತಮಾತೆಯ ಸ್ವರೂಪವೆಂಬಂತೆ ಕಾಣಲಾಗುತ್ತದೆ. ಹೆಣ್ಣನ್ನು ದೇವರೆಂದು ಕಾಣುವ, ಗೌರವಿಸುವ ದೇಶ ನಮ್ಮ ಭಾರತದೇಶ ಎಂದು ಹೇಳಿದರು.
ಇನ್ನೂ ಇದೇ ವೇಳೆ ತಮ್ಮ ಮಾತನಾಡಿದ ಎಬಿವಿಪಿಯ ಜಿಲ್ಲಾ ಸಂಚಾಲಕ ಅಪ್ಪು ಪಾಟೀಲ್, ಮಹಿಳೆಯರು ಏಕಾಂಗಿಯಾಗಿ ನಿರ್ಭಯದಿಂದ ಓಡಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಬಗೆ ತಿಳಿಸುವ ನಿಟ್ಟಿನಲ್ಲಿ 'ಮಿಷನ್ ಸಾಹಸಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.