ಬೆಂಗಳೂರು: ಜಿಲ್ಲಾ ಕೇಂದ್ರಗಳ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮವು ಸ್ಮಾರ್ಟ್ ಸಿಟಿ ಯೋಜನೆಯಡಿ 111 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದ ಐದಂತಸ್ತಿನ ಬೃಹತ್ ಕಟ್ಟಡವನ್ನೊಳಗೊಂಡ ಟರ್ಮಿನಲ್ ಅನ್ನು ತುಮಕೂರಿನಲ್ಲಿ ನಿರ್ಮಿಸುತ್ತಿದ್ದು ಹೊಸ ಕಟ್ಟಡ ನಿರ್ಮಾಣ ಕಾರ್ಯವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಪರಿಶೀಲಿಸಿದ್ದಾರೆ.
ಕೆಳ ಮಹಡಿ, ನೆಲ ಮಹಡಿಯೊಂದಿಗೆ ಮೊದಲ, ಎರಡನೇ ಹಾಗು ಮೂರನೇ ಮಹಡಿವರೆಗೆ ನಿರ್ಮಾಣಗೊಳ್ಳುತ್ತಿರುವ ಹೊಸ ಕಟ್ಟಡದಲ್ಲಿ ಕೆಎಸ್‌ಆರ್‌ಟಿಸಿ ಆಡಳಿತ ಕಚೇರಿ, ಶಾಪಿಂಗ್ ಮಾಲ್, ಕುಡಿಯುವ ನೀರಿನ ಸೌಲಭ್ಯ, ಹೋಟೆಲ್, ಲಾಡ್ಜ್, ಶೌಚಾಲಯಗಳು, 4 ಎಸ್ಕಲೇಟರ್ಗಳು ಮತ್ತು 04 ಲಿಫ್ಟ್ಗಳು, ಸೌರ ಮೇಲ್ಛಾವಣಿ, ಮಳೆ ನೀರು ಕೊಯ್ಲು ವ್ಯವಸ್ಥೆ, ಅಗ್ನಿ ಸುರಕ್ಷತಾ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ವೈದ್ಯಕೀಯ ಸೇವಾ ಕೇಂದ್ರ, ಟಿಕೆಟ್ ಕಾಯ್ದಿರಿಸುವ ಕೇಂದ್ರ, ಲಗೇಜ್ ರೂಮ್, ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಶಿಶು ಆರೈಕೆ ಕೊಠಡಿಗಳು ಹೊಸ ಕಟ್ಟಡದಲ್ಲಿದ್ದು ಎಲ್ಲವನ್ನೂ ಖುದ್ದು ಪರಿಶೀಲನೆ ನಡೆಸಿದರು.
4.17 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಬೃಹತ್ ಬಸ್ ಟರ್ಮಿನಲ್ ರಾಜ್ಯದ ಪ್ರಮುಖ ಟರ್ಮಿನಲ್ಗಳಲ್ಲಿ ಒಂದು. ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲ ರೀತಿ ತುಮಕೂರು ಇದ್ದು ಹೆಚ್ಚಿನ ಬಸ್ಗಳ ಸಂಚಾರ ಇರುವ ಕಾರಣದಿಂದ ಈ ನಿಲ್ದಾಣ ಮಹತ್ವದ್ದು. ಚಿಕ್ಕಮಗಳೂರು, ಶಿವಮೊಗ್ಗ, ಕಾರವಾರ ಭಾಗ, ದಾವಣಗೆರೆ, ಹುಬ್ಬಳ್ಳಿ ಒಳಗೊಂಡ ಮಧ್ಯ ಕರ್ನಾಟಕ, ವಾಯುವ್ಯ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಸ್ಗಳು ತುಮಕೂರು ಮಾರ್ಗದಿಂದಲೇ ತೆರಳುವ ಹಿನ್ನೆಲೆಯಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಇದರ ಜೊತೆಗೆ ದಾವಣಗೆರೆ ಸೇರಿದಂತೆ ಇನ್ನೂ ಕೆಲವೆಡೆ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿರುವ ಬಸ್ ನಿಲ್ದಾಣ ಕಾಮಗಾರಿಗಳ ಬಗ್ಗೆಯೂ ಸಚಿವರು ಮಾಹಿತಿ ಪಡೆದುಕೊಂಡಿದ್ದು, ರಾಜ್ಯ ಸರ್ಕಾರ ಹಾಗು ನಿಗಮಕ್ಕೆ ಹೊರೆಯಾಗದ ರೀತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅನುದಾನ ಲಭ್ಯವಾದಲ್ಲಿ ಮತ್ತಷ್ಟು ಬಸ್ ನಿಲ್ದಾಣಗಳ ಮೇಲ್ದರ್ಜೆಗೇರಿಸಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಸಚಿವರು ಉತ್ಸುಕತೆ ತೋರಿದ್ದಾರೆ. ಬಸ್ ನಿಲ್ದಾಣಗಳ ಮೇಲ್ದರ್ಜೆ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಮ್ಮಲ್ಲಿ 175 ಬಸ್ ನಿಲ್ದಾಣಗಳಿವೆ, ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ದೊಡ್ಡ ಪಟ್ಟಣಗಳಲ್ಲಿಯೂ ಬಸ್ ನಿಲ್ದಾಣಗಳಿವೆ. ಹಾಗಾಗಿ ನಮಗೆ ಮತ್ತೆ ಹೊಸ ನಿಲ್ದಾಣಗಳ ಅಗತ್ಯ ಇಲ್ಲ. ಆದರೆ ಸ್ಥಳಾವಕಾಶ ಇರುವ ಕಡೆ ನಿಲ್ದಾಣಗಳ ವಿಸ್ತರಣೆ ಮಾಡುತ್ತೇವೆ ಎಂದರು.
ಬಿಎಂಟಿಸಿಗೆ 1,400 ಎಕರೆ ಜಾಗ ಇದೆ ಹಾಗಾಗಿ ಹೊಸದಾಗಿ ಜಾಗ ಖರೀದಿ ಮಾಡಬೇಕಿಲ್ಲ. ಗ್ರಾಮಾಂತರದ ಪ್ರದೇಶದಲ್ಲಿ ಖರೀದಿ ಮಾಡುವ ಬದಲು ಸರ್ಕಾರದ ವಿವಿಧ ಇಲಾಖೆಗಳ ಜಾಗವೇ ಇದೆ ಅದನ್ನು ಬಳಸಿಕೊಳ್ಳಲಾಗುತ್ತದೆ, ಬಸ್ಗಳ ಸಂಖ್ಯೆ ಹೆಚ್ಚಿದರೂ ನಮಗೆ ಹೊಸದಾಗಿ ಜಾಗ ಖರೀದಿಯ ಅಗತ್ಯತೆ ಬೀಳುವುದಿಲ್ಲ, ಇರುವ ಜಾಗವೇ ಸಾಕಾಗಲಿದೆ, ಬಸ್ ನಿಲ್ದಾಣ ವಿಸ್ತರಣೆ, ಮೇಲ್ದರ್ಜೆ ಕಡೆ ಮಾತ್ರ ಗಮನ ಹರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆಯೊಂದೇ ಕಾವೇರಿ ನದಿ ನೀರು ಸಮಸ್ಯೆಗೆ ಪರಿಹಾರ: ಡಿಸಿಎಂ ಡಿ.ಕೆ.ಶಿವಕುಮಾರ್