ತುಮಕೂರು : ನನಗೆ ಯಾವ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಕೊಟ್ಟಿಲ್ಲ ಅಂತಾ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುವುದು ಸಮಂಜಸವಲ್ಲ. ತವರು ಜಿಲ್ಲೆಯಲ್ಲಿ ಯಾರಿಗೂ ಉಸ್ತುವಾರಿ ಕೊಡದಿರುವ ಬಗ್ಗೆ ಪಕ್ಷ ಮೊದಲೇ ತೀರ್ಮಾನ ತೆಗೆದುಕೊಂಡಿತ್ತು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ತುಮಕೂರಿನ ಜೆಸಿಪುರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಇದರ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ರು. ಯಾವ ಜಿಲ್ಲೆಗೆ ಉಸ್ತುವಾರಿ ವಹಿಸಿಕೊಳ್ತಿರಾ? ಎಂದು ಕೇಳಿದ್ದರು. ಜಿಲ್ಲೆಯ ಪೂರ್ವಾಪರ ಗೊತ್ತಿಲ್ಲದೇ ಬೇರೆ ಜಿಲ್ಲೆಗೆ ಹೋಗಿ ಕೆಲಸ ಮಾಡಲು ನಂಗೆ ಇಷ್ಟವಿಲ್ಲ ಎಂದು ಹೇಳಿದ್ದೆ ಎಂದಿದ್ದಾರೆ.
ಇದರ ಹಿಂದೆ ಯಾವುದೇ ರಾಜಕಾರಣವಿಲ್ಲ. ನನಗೆ ಮಾತ್ರವಲ್ಲ, ನನಗಿಂತ ಹಿರಿಯರಾದ ಕೆ ಎಸ್ ಈಶ್ವರಪ್ಪ ಅವರು ಸೇರಿದಂತೆ ಎಲ್ಲರಿಗೂ ಈ ರೀತಿಯ ತೀರ್ಮಾನ ತೆಗೆದುಕೊಂಡಿದ್ದಾರೆ.
ಏನು ಗೊತ್ತಿಲ್ಲದ ಜಿಲ್ಲೆಗೆ ಹೋಗಿ, ಅಂಕಿ-ಅಂಶ ರಿವ್ಯೂ ಮಾಡುತ್ತ ಕೂರಲು ನನಗೆ ಇಷ್ಟವಿಲ್ಲ. ಆ ಜಿಲ್ಲೆಯ ಅಭಿವೃದ್ಧಿ ಮತ್ತು ವಾಸ್ತವತೆ ಗೊತ್ತಿಲ್ಲದೆ ಬರೀ ರಿವ್ಯೂ ಮಾಡುತ್ತಾ ಕೂರಲು ಇಷ್ಟವಿಲ್ಲ ಎಂದಿದ್ದೆ.
ಹಾಗಾಗಿ, ನಾನು ಬೇರೆ ಜಿಲ್ಲೆಗೆ ಹೋಗಲು ನಿರಾಕರಿಸಿದ್ದೆ. ತುಮಕೂರು ಜಿಲ್ಲೆಯ ಆಳ-ಅಗಲ ಗೊತ್ತಿರುವುದರಿಂದ ನಾನು ಇಲ್ಲಿ ಕೆಲಸ ಮಾಡಿ ಒಳ್ಳೆಯ ಹೆಸರು ತಗೋಬಹುದಿತ್ತು. ಬೇರೆ ಜಿಲ್ಲೆಗೆ ಹೋಗಿ ಕೆಟ್ಟ ಹೆಸರು ತೆಗೆದುಕೊಳ್ಳಲು ಇಷ್ಟವಿಲ್ಲ ಎಂದರು.
ಮುಖ್ಯಮಂತ್ರಿಗಳಿಗೂ ನನಗೂ ತುಂಬಾ ವಿಶ್ವಾಸವಿದೆ. ಪಾಪ ಅವರು ಮೂರ್ನಾಲ್ಕು ಬಾರಿ ಫೋನ್ ಮಾಡಿ, ನನಗೆ ಒಪ್ಪಿಸಲು ಟ್ರೈ ಮಾಡಿದ್ರೂ, ನಾನು ಒಪ್ಕೊಂಡಿಲ್ಲ. ನಾನು ಮತ್ತು ಆರ್. ಅಶೋಕ್ ಕೂಡ ಇದಕ್ಕೆ ಒಪ್ಪಿಲ್ಲ. ಅವರು ನನ್ನ ಅಭಿಪ್ರಾಯ ಕೇಳಿದ್ರು. ಇದರಲ್ಲಿ ಯಾವುದೇ ರೀತಿಯ ಪಿತೂರಿ ಇಲ್ಲ ಎಂದು ಹೇಳಿದರು.
ಓದಿ: ಉದ್ಯೋಗ ನೀಡುವ ಆಮಿಷವೊಡ್ಡಿ ಮಂಗಳೂರಿನ ವ್ಯಕ್ತಿಗೆ ₹25.49 ಲಕ್ಷ ವಂಚನೆ