ತುಮಕೂರು : ಸೆಪ್ಟೆಂಬರ್ 23 ರೊಳಗೆ ವಿಧಾನಸಭೆ ಅಧಿವೇಶನ ಆರಂಭವಾಗಬೇಕಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಅಧಿವೇಶನ ನಡೆಸುವ ಕುರಿತು ಮಾತುಕತೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ತುಮಕೂರಿನಲ್ಲಿ ಮಾತನಾಡಿ, ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನ ನಡೆಸುವ ಕುರಿತು ಚರ್ಚೆಗಳು ನಡೆದಿವೆ. ಬೇರೆ ಸ್ಥಳಗಳಲ್ಲಿ ಅಧಿವೇಶನ ನಡೆಸುವ ಚಿಂತನೆ ಮಾಡಲಾಗಿದೆ. ಅದೇ ರೀತಿ ವಿಧಾನಸಭೆ ಅಧಿವೇಶನವನ್ನು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ಹೇಗೆ ನಡೆಸಬೇಕು ಎಂಬವುದರ ಕುರಿತು ಸ್ಪೀಕರ್ ಜೊತೆ ಚರ್ಚಿಸಿ, ಈಗಾಗಲೇ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಅದನ್ನು ಸಚಿವ ಸಂಪುಟದ ಮುಂದಿಟ್ಟು ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.
ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆಯ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ವಾರಂಟೈನ್ನಲ್ಲಿ ಇದ್ದಾರೆ. ಅವರು ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ. 3 ಸಾವಿರ ಜನ ಏಕಾಏಕಿ ಸೇರಿ ಗಲಭೆ ನಡೆಸುತ್ತಾರೆ ಎಂದರೆ ಇದು ಪೂರ್ವ ನಿಯೋಜಿತವಾಗಿತ್ತ ಎಂಬುವುದರ ಬಗ್ಗೆ ತನಿಖೆಯ ನಂತರವಷ್ಟೇ ಬೆಳಕಿಗೆ ಬರಲಿದೆ ಎಂದರು.
ಸಾಮಾಜಿಕ ಜಾಲತಾಣದ ಪೋಸ್ಟ್ಗೆ ಈ ರೀತಿಯ ಪ್ರತಿಕ್ರಿಯೆ ಮಾಡಬಾರದಿತ್ತು. ಇದಕ್ಕೆ ಶಾಸಕರ ಸಹಕಾರ ಇದೆಯೋ ಇಲ್ಲವೋ ಎಂಬುವುದನ್ನು ತಿಳಿಯಬೇಕಿತ್ತು. ಧರ್ಮಗುರು ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರೆ ಅದು ತಪ್ಪು, ದುಡುಕಿ ಈ ರೀತಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಬಾರದು. ಯಾರೋ ಒಬ್ಬ ಪೋಸ್ಟ್ ಮಾಡಿದ ಎಂಬ ಮಾತ್ರಕ್ಕೆ ಮತ್ತೊಬ್ಬರ ಮನೆಗೆ ಹೋಗಿ ಬೆಂಕಿ ಹಾಕುವುದನ್ನು ಸಹಿಸಿಕೊಂಡು ಸರ್ಕಾರ ನಡೆಸಲು ಸಾಧ್ಯವಿಲ್ಲ. ಈ ಘಟನೆಯಲ್ಲಿ ಜಾತಿ ರಾಜಕೀಯ ಪಕ್ಷ ಯಾವುದನ್ನು ತರಬಾರದು, ನಾವೂ ತರುವುದಿಲ್ಲ ಎಂದು ಹೇಳಿದರು.