ತುಮಕೂರು: ಪಾವಗಡ ತಾಲೂಕಿನ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೆ ಚಿತ್ರದರ್ಗದ ಸಂಸದ ನಾರಾಯಣ ಸ್ವಾಮಿಗೆ ಪ್ರವೇಶ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಾಧುಸ್ವಾಮಿ ಅವರು, ಸಂಸದರು ಎಂದು ಹೇಳುವ ಬದಲು ಒಬ್ಬ ಹರಿಜನರಿಗೆ ಪ್ರವೇಶ ನೀಡಲಿಲ್ಲ ಎಂಬುದರ ಬಗ್ಗೆ ಮೊದಲು ಅರಿಯಬೇಕು. ಈ ವಿಚಾರದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಚಿವರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಇಂದು ಅಧಿಕಾರಿಗಳ ಜೊತೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು. ತುಮಕೂರು ಜಿಲ್ಲೆ ಸ್ಮಾರ್ಟ್ ಸಿಟಿ ಆಗಿ ಬದಲಾಗುತ್ತಿದೆ, ಅಧಿಕಾರಿಗಳು ಸ್ಮಾರ್ಟ್ ಮಾಡುತ್ತೇವೆ ಎಂದು ಹೇಳಿಕೊಂಡು ಡರ್ಟಿ ಮಾಡಿಕೊಂಡು ಕೂತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು ಎಂದರು.
ಐದು ವರ್ಷದ ಸ್ಮಾರ್ಟ್ಸಿಟಿ ಯೋಜನೆಯನ್ನು ಹಂತಹಂತವಾಗಿ ಪೂರ್ಣಗೊಳಿಸಲಾಗುವುದು. ಮೊದಲಿಗೆ ರಸ್ತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದೆ. ಆನಂತರದಲ್ಲಿ ಬಸ್ ಶಟರ್ ನಿರ್ಮಾಣ, ಉದ್ಯಾನವನ, ಲೈಬ್ರರಿ, ಮಾಡಲಾಗುವುದು. 24 ಗಂಟೆಗಳ ಕಾಲ ನಿರಂತರ ಮನೆಗಳಿಗೆ ನೀರನ್ನು ಹರಿಸುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದ್ದು, ಜೊತೆಗೆ ನಗರದ ಎಲ್ಲಾ ವಾರ್ಡ್ಗಳಲ್ಲಿಯೂ ಯುಜಿಡಿ ಪೂರ್ಣಗೊಂಡಿಲ್ಲ, ಇವೆಲ್ಲವನ್ನು ಸರಿಪಡಿಸಲಾಗುವುದು ಎಂದರು.
ಇನ್ನು ಇಡಿ ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಸಮನ್ಸ್ ಜಾರಿ ಆಗಿರುವುದರ ಬಗ್ಗೆ ಪ್ರತಿಕ್ರಿಯಿಸಿd ಮಾಧುಸ್ವಾಮಿ ಅವರು, 184 ಜನರಲ್ಲಿ ಇವರು ಒಬ್ಬರಾಗಿದ್ದಾರೆ. ಅಧಿಕಾರಿಗಳಿಗೆ ಅನುಮಾನ ಬಂದ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ಮಾಡುತ್ತಾರೆ ಅಷ್ಟೇ, ವಿಚಾರಣೆ ಪೂರ್ಣಗೊಳ್ಳುವವರೆಗೂ ಏನನ್ನೂ ಮಾತನಾಡುವುದಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಸೋತಿದ್ದಾರೆ. ಹಾಗಾಗಿ ಚುನಾವಣೆ ಮಾಡಲು ಆತುರದಲ್ಲಿದ್ದಾರೆ ಎಂದರು.