ತುಮಕೂರು: ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನದಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿರುವ ಸಚಿವ ಕೆ ಎನ್ ರಾಜಣ್ಣ, ಇದನ್ನು ಯಾರು ಕೂಡ ಸಹಿಸಲ್ಲ ಎಂದಿದ್ದಾರೆ.
ಶ್ರೀರಾಮನನ್ನು ಬಿಜೆಪಿಯವರು ಗುತ್ತಿಗೆ ತಗೊಂಡಿಲ್ಲ- ಸಚಿವ ರಾಜಣ್ಣ: ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮನನ್ನು ಬಿಜೆಪಿಯವರು ಗುತ್ತಿಗೆ ತಗೊಂಡಿಲ್ಲ. ಹಿಂದುತ್ವವನ್ನು ಯಾವುದೇ ಪಕ್ಷಕ್ಕೆ ಗುತ್ತಿಗೆ ಕೊಟ್ಟಿಲ್ಲ. ನಾವೆಲ್ಲ ಹಿಂದುಗಳೇ. ಬಿಜೆಪಿಯವರು ರಾಜಕಾರಣ, ವೋಟಿಗಾಗಿ ಪದೇ ಪದೆ ಹಿಂದೂ ವಿರೋಧಿ ಸರ್ಕಾರ ಅನ್ನೋದನ್ನು ಖಂಡಿಸುತ್ತೇವೆ. ಅವರ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಿ ಎಂದರು.
ಹಿಂದುತ್ವವನ್ನು ಬಂಡವಾಳ ಮಾಡಿಕೊಂಡು ಬೇರೆಲ್ಲ ಹಿಂದುಗಳಿಗೆ ಅಪಮಾನ ಮಾಡುವುದು ಸರಿಯಲ್ಲ.
ಹಿಂದುತ್ವ ದುರುಪಯೋಗ ಪಡಿಸಿಕೊಳ್ಳುವುದನ್ನು ನೋಡಿಯೇ, ಡಾ. ಬಿ ಆರ್ ಅಂಬೇಡ್ಕರ್ ಹಿಂದುತ್ವವನ್ನು ತ್ಯಜಿಸಿ ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿದ್ದರು ಅನ್ಸುತ್ತೆ ಎಂದು ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದುತ್ವವನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದು ಮುಖಂಡರಿಗೆ ಶೋಭೆ ತರುವುದಿಲ್ಲ. ಹುಬ್ಬಳ್ಳಿಯಲ್ಲಿ ಬಂಧಿಸಿದವನ ವಿರುದ್ಧ 16 ಕೇಸ್ಗಳಿವೆ. ಆತನನ್ನು ಬಂಧಿಸಿದ ತಕ್ಷಣ, ಎಲ್ಲ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ಬಿಜೆಪಿಯವರು ದೇಶಾದ್ಯಂತ ಇಶ್ಯೂ ಮಾಡ್ತಾರೆ ಎಂದು ಆರೋಪಿಸಿದರು.
ಬಂಧಿತ ದೊಂಬಿ, ಕೊಲೆ, ಮಟ್ಕಾದಲ್ಲಿ ತೊಡಗಿ ದಶಕಗಳಿಂದ ದಂಧೆ ಮಾಡಿಕೊಂಡು ಬಂದಿದ್ದನು. ಈ ಬಗ್ಗೆ ಪರಿಶೀಲಿಸಿದಾಗ, ದೀರ್ಘಾವಧಿಯಿಂದ ಬಾಕಿ ಇರುವ ಕೇಸ್ ಅಂತ ಗೊತ್ತಾಗಿದೆ. ಇಲಾಖೆಯ ಉನ್ನತಾಧಿಕಾರಿಗಳು ಪರಿಶೀಲನೆಗೆ ಬಂದಾಗ ತೊಂದರೆಯಾಗುತ್ತದೆ ಎಂದು ಅಲ್ಲಿನ ಠಾಣಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬಂಧನ ಮಾಡಿಲ್ಲ ಎಂದು ಸಚಿವ ರಾಜಣ್ಣ ಸ್ಪಷ್ಟಪಡಿಸಿದರು.
ಹಿಂದುತ್ವದ ಹೆಸರಿನಲ್ಲಿ ಅಪರಾಧಕ್ಕೆ ಒಳಗಾದವರನ್ನು ರಕ್ಷಿಸುವುದು ಸರಿಯಲ್ಲ. ಬಿಜೆಪಿಯವರು ಎಲ್ಲ ವಿಷಯದಲ್ಲಿಯೂ ರಾಜಕಾರಣ ಮಾಡುವುದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತಪಿತಸ್ಥರ ವಿಷಯವನ್ನು ರಾಜಕಾರಣಕ್ಕೆ ಬಳಸಿಕೊಂಡು,
ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು ಎಂದರು.
ಹಿಂದುಗಳೊಬ್ಬರಿಂದಲೇ ದೇಶ ಕಟ್ಟಲಾಗಿಲ್ಲ. ಎಲ್ಲ ಧರ್ಮದವರಿಂದ ದೇಶ ಕಟ್ಟಲಾಗಿದೆ. ರಾಕೆಟ್ ಟೆಕ್ನಾಲಜಿ ಈಗಲೂ ಪ್ರಚಲಿತವಿದೆ. ಅದು ಟಿಪ್ಪು ಟೆಕ್ನಾಲಜಿನೇ ಅಂತಾ ಈಗಲೂ ಪ್ರಚಲಿತದಲ್ಲಿದೆ. ಟಿಪ್ಪು ರಾಕೆಟ್ ಟೆಕ್ನಾಲಜಿ ಅಭಿವೃದ್ಧಿಪಡಿಸಿ ಹೋಗಿದ್ದರು. ಅಬ್ದುಲ್ ಕಲಾಂ ಅವರು ಆ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿಕೊಂಡು ಬಂದರು. ಕಲಾಂ ಅವರು ಸೈಂಟಿಸ್ಟ್ ಆಗಿದ್ದರು. ರಾಷ್ಟ್ರಪತಿ ಆಗಿಯೂ ಪ್ರಪಂಚದ ಗೌರವನ್ನು ಗಳಿಸಿಕೊಂಡು ಬಂದಿದ್ದರು. ಈ ರೀತಿ ನಿದರ್ಶನನಗಳಿವೆ ಎಂದು ತಿಳಿಸಿದರು.
ಇದನ್ನೂಓದಿ:ಅಯೋಧ್ಯೆಯ ರಾಮ ಮಂದಿರಕ್ಕೆ ಧಾರವಾಡದ ಕುರುಬ ಸಮುದಾಯದಿಂದ ಕಂಬಳಿ ಉಡುಗೊರೆ