ತುಮಕೂರು: ನೂತನ ಸಚಿವರಾದ ಬಳಿಕ ಮೊದಲ ಬಾರಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟ ಡಾ. ಜಿ ಪರಮೇಶ್ವರ್, ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಬಳಿಕ ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳು, ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಶ್ರೀಗಳ ಅಶೀರ್ವಾದ ಪಡೆದರು. ಸಿದ್ಧಗಂಗಾ ಮಠದ ಮಕ್ಕಳ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು. ಡಾ ಜಿ ಪರಮೇಶ್ವರ್ ಅವರೊಂದಿಗೆ ಕಾಂಗ್ರೆಸ್ ಮುಖಂಡರು ಇದ್ದರು.
ಸಿದ್ಧಗಂಗಾ ಮಠಕ್ಕೆ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನೀಡಿದ ಅವರು, ಯಾವುದೇ ಕಾರ್ಯಕ್ಕೆ ನಮ್ಮಲ್ಲಿ ಒಂದು ಪದ್ಧತಿ ಇದೆ. ಶ್ರೀ ಮಠಕ್ಕೆ ಭೇಟಿ ಕೊಟ್ಟು, ಪರಮಪೂಜ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಳ್ಳೋದು ಒಂದು ಸಂಪ್ರದಾಯವಾಗಿದೆ. ನಮ್ಮ ಜಿಲ್ಲೆಗೆ ಅನೇಕ ರಾಜ್ಯದ ಜನರು ಬಂದು ಈ ಸಂಪ್ರದಾಯವನ್ನು ಪಾಲಿಸುತ್ತಾರೆ. ನಮ್ಮ ತಂದೆಯವರ ಕಾಲದಿಂದ ನಮ್ಮ ಕುಟುಂಬದವರೆಲ್ಲರೂ ಶ್ರೀ ಮಠಕ್ಕೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಹಾಗಾಗಿ ಯಾವುದೇ ಕಾರ್ಯವನ್ನು ಮಾಡಿದಂತಹ ಸಂದರ್ಭದಲ್ಲಿ, ನಾವು ಪರಮಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಳ್ಳುತ್ತೇವೆ. ದೊಡ್ಡವರು ಇದ್ದಾಗ ಅವರು ಕೂಡಾ ಆಶೀರ್ವಾದ ಮಾಡೋರು. ಈಗ ಸಿದ್ಧಲಿಂಗ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಚುನಾವಣೆಯ ಮೊದಲು ಇಲ್ಲಿಗೆ ಬಂದು ಆಶೀರ್ವಾದ ಪಡೆದುಕೊಂಡಿದ್ದೆ. ಈಗ ಗೆದ್ದ ಮೇಲೆ ಬಂದು ಅದರಲ್ಲೂ ವಿಶೇಷವಾಗಿ ಸಚಿವರಾಗಿ ಬಂದು ಆಶೀರ್ವಾದ ಪಡೆದಿದ್ದೇನೆ. ಈ ಹಿಂದೆಯೂ ಸಹ ಇದನ್ನೆಲ್ಲಾ ಮಾಡಿಕೊಂಡು ಬಂದಿದ್ದೇನೆ. ಇದೇನು ಹೊಸದೇನಲ್ಲಾ, ರಾಜ್ಯಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದ್ದಾರೆ ಎಂದರು.
ಖಾತೆ ಹಂಚಿಕೆ ವಿಚಾರ: ಈಗಾಗಲೇ 8+2 = 10 ಜನರಿಗೆ ಸಚಿವ, ಉಪಮುಖ್ಯಮಂತ್ರಿ ಹೀಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇನ್ನುಳಿದವರಿಗೆ ಮೂರು ದಿನ ಆದ ಮೇಲೆ ಸಚಿವ ಸ್ಥಾನ ಕೊಡಬಹುದು ಅಂತ ಅಂದುಕೊಂಡಿದ್ದೇನೆ. ಇನ್ನು 24, 25 ಸಚಿವರ ಆಯ್ಕೆಯಾಗಬೇಕು. ಬಹುಶಃ ಅದೆಲ್ಲಾ ಆದ ಮೇಲೆ ಮುಖ್ಯಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡುವ ಚಿಂತನೆ ಇರಬಹುದು. ಅಥವಾ ಈಗಲೇ ಮಾಡಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ನಿರೀಕ್ಷೆ ಮಾಡ್ತಿದ್ದೇನೆ. ಈಗ ಆಗಿರೋರೆಲ್ಲಾ ಹಿರಿಯ ಸಚಿವರೇ. ಸ್ವಾಭಾವಿಕವಾಗಿ ಎಲ್ಲರಿಗೂ ದೊಡ್ಡ ದೊಡ್ಡ ಖಾತೆಗಳ ಬಗ್ಗೆ ಆಕಾಂಕ್ಷೆ ಇರುತ್ತೆ. ಯಾರಿಗೆ ಯಾವ ಖಾತೆ ಕೊಡ್ಬೇಕು ಅನ್ನೋದು ಮಾನ್ಯ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಇನ್ನೂ ಮೂವರು ಸಚಿವ ಅಕಾಂಕ್ಷಿಗಳ ವಿಚಾರ: ಮೂರೇ ಯಾಕೆ 7 ಜನರನ್ನು ಸಚಿವರನ್ನಾಗಿ ಮಾಡಬಹುದಲ್ಲಾ. 7 ಜನರನ್ನು ಸಚಿವರನ್ನಾಗಿ ಮಾಡಬಹುದು. ಯಾಕೆ ತುಮಕೂರಿಗೆ ಮೂರು. ನಮ್ಮ ಹೈಕಮಾಂಡ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಗೊತ್ತಿದೆ. ಅವರಿಬ್ಬರು ಯಾವ ತೀರ್ಮಾನವನ್ನು ತಗೊಳ್ತಾರೋ ಅದರಂತೆ ನಡೆಯುತ್ತೆ ಎಂದರು.
ದಲಿತ ಸಿಎಂ ಕೂಗು ಕೇಳಿಬಂದ ವಿಚಾರ: ಅದೆಲ್ಲಕ್ಕೂ ಈಗ ತೆರೆ ಬಿದ್ದೋಗಿದೆ. ಈಗ ಆ ಕೂಗುಗಳೆಲ್ಲಾ, ಸರ್ಕಾರವನ್ನು ನಡೆಸೋದಿಕ್ಕೆ ಸಹಾಯ ಮಾಡಿದ್ರೆ ಸಾಕು ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಬಿ ವೈ ವಿಜಯೇಂದ್ರ: ಭುಜ ತಟ್ಟಿ ಹಾರೈಸಿದ ಸಿಎಂ ಸಿದ್ದರಾಮಯ್ಯ.. ವಿಡಿಯೋ