ತುಮಕೂರು: ಜಿಲ್ಲೆಯಲ್ಲಿ ಇಂದು ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು 3 ಲಕ್ಷ ರೂ ಬೆಲೆಯ ಆಫೀಮನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೊರಟಗೆರೆ ತಾಲೂಕು ವ್ಯಾಪ್ತಿಯಲ್ಲಿ 1 ಕೆಜಿ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಜಂಪೇನಹಳ್ಳಿ ಕ್ರಾಸ್ ಮಾರುತಿ ಡಾಬಾ ಮುಂಭಾಗ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಮಂಜುನಾಥ, ಮುನಿರಾಜು, ಚಿನ್ನ, ರಾಮಾಂಜಿ, ಸೀತಾರಾಮಯ್ಯ ಅವರುಗಳನ್ನು ಬಂಧಿಸಲಾಗಿದ್ದು ಮತ್ತೊಬ್ಬ ಆರೋಪಿ ಮಾರಪ್ಪ ತಲೆಮರೆಸಿಕೊಂಡಿದ್ದಾನೆ.
ಇನ್ನು ತುಮಕೂರು ನಗರ ವ್ಯಾಪ್ತಿಯಲ್ಲಿ ಅಫೀಮು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಸುಮಾರು 3 ಲಕ್ಷ ರೂ ಬೆಲೆಬಾಳುವ 1.5 ಕೆಜಿ ಅಫೀಮ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಾದ ರಾಜು ರಾಮ್ ಮತ್ತು ನರಸಿಂಹರಾವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ತುಮಕೂರು ನಗರದ ಬಿಜೆ ಪಾಳ್ಯ ಸರ್ಕಲ್ ಹಾಗೂ ಸಂತೆಪೇಟೆ ಮಾರ್ಗದ ರಸ್ತೆಯಲ್ಲಿನ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಹನುಮಂತರಾಯಪ್ಪ ಎಂಬುವರ ಮಾಲೀಕತ್ವದ ಮನೆಯ ಮೇಲೆ ದಾಳಿ ಮಾಡಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಜಿಲ್ಲೆಯನ್ನು ಡ್ರಗ್ಸ್ ವಿಮುಕ್ತ ಜಿಲ್ಲೆಯನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.