ತುಮಕೂರು:ಇಲ್ಲಿನ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಶಿಷ್ಯ ಮನೋಜ್ ಕುಮಾರ್ ಅವರನ್ನು ನೂತನ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗುತ್ತಿದೆ.
ತುಮಕೂರು ಸಿದ್ದಗಂಗಾ ಮಠದಲ್ಲಿ ಏಪ್ರಿಲ್ 23 ರಂದು ಅಕ್ಷಯ ತೃತೀಯ ದಿನ ಬಸವ ಜಯಂತಿ ಹಬ್ಬದ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಶಿಷ್ಯ ಮನೋಜ್ ಕುಮಾರ್ ಅವರಿಗೆ ಮಠದ ನಿರಂಜನ ಪಟ್ಟಾಧಿಕಾರಿ ಉತ್ಸವ ಜರುಗಲಿದೆ.
ಶ್ರೀ ಸಿದ್ದಗಂಗಾ ಮಠದ ಪರಂಪರೆಯಲ್ಲಿ ಉತ್ತರಾಧಿಕಾರಿಗಳನ್ನು ಈ ವರೆಗೆ ನೇಮಕ ಮಾಡದಿರುವುದನ್ನು ಗಮನಿಸಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೇ ಈ ಕುರಿತಂತೆ, ಸಿದ್ದಗಂಗಾ ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ ಟಿ ಕೆ ನಂಜುಂಡಪ್ಪ ಮಠದ ಸದಸ್ಯರಿಗೆ ಕಳುಹಿಸಿರುವ ಪತ್ರ ಒಂದರಲ್ಲಿ ಉಲ್ಲೇಖಿಸಿದ್ದಾರೆ.
ಏಪ್ರಿಲ್ 23 ರಂದು ಅಕ್ಷಯ ತೃತೀಯ ದಿನ ಬಸವ ಜಯಂತಿ ಇರುವುದರಿಂದ ಅಂದು ಮನೋಜ್ ಕುಮಾರ್ ಅವರಿಗೆ ಸಿದ್ದಗಂಗಾ ಮಠದ ಉತ್ತರಾಧಿಕಾರಿ ನಿರಂಜನ ಪಟ್ಟಾಧಿಕಾರವನ್ನು ನೆರವೇರಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಉಪನ್ಯಾಸಕರಾಗಿದ್ದ ಮನೋಜ್ ಕುಮಾರ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನ ಹಳ್ಳಿಯ ಷಡಕ್ಷರಯ್ಯ ಮತ್ತು ವಿರೂಪಾಕ್ಷಮ್ಮರವರ ಪುತ್ರರಾದ ಮನೋಜ್ ಕುಮಾರ್ ಅವರು, ಬಿಈಡಿ, ಎಂಎಸ್ಸಿ, ಸಿಎಂಎ, ಹಾಗೂ ವಿದ್ವತ್ ಪೂರ್ಣಗೊಳಿಸಿ ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರನ್ನು ಬಸವ ಜಯಂತಿ ಹಬ್ಬದಂದು ಶ್ರೀ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗುವುದು.
ಅದೇ ರೀತಿ ಮಾಗಡಿ ತಾಲೂಕಿನ ಕುಂಚಗಲ್ ಬಂಡೆ ಮಠಕ್ಕೂ ಕೂಡ ಹರ್ಷ ಎಂಬುವರನ್ನು ಉತ್ತರ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತಿದೆ, ದೇವನಹಳ್ಳಿಯಲ್ಲಿರುವ ಬಸವ ಕಲ್ಯಾಣ ಮಠಕ್ಕೂ ಕೂಡ ಗೌರೀಶ್ ಕುಮಾರ್ ಎಂಬುವರನ್ನು ಉತ್ತರಾಧಿಕಾರಿಯನ್ನಾಗಿ ಅಂದು ನೇಮಕ ಮಾಡಲಾಗುತ್ತಿದೆ.
15 ನೇ ಶತಮಾನದಲ್ಲಿ ಶ್ರೀ ಗೋಸಲ ಸಿದ್ದೇಶ್ವರ ಸ್ವಾಮೀಜಿ ಶ್ರೀ ಸಿದ್ದಗಂಗಾ ಮಠವನ್ನು ಸ್ಥಾಪಿಸಿದರು. ಪ್ರಖ್ಯಾತ ಶಿವಯೋಗಿಗಳ ಈ ಪರಂಪರೆಯಲ್ಲಿ ಶ್ರೀ ಶ್ರೀ ಅಟವೀಶ್ವರ ಸ್ವಾಮಿಗಳು, ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳು ಮತ್ತು ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಅವರ ಅನನ್ಯ ಕೊಡುಗೆಗಳೊಂದಿಗೆ ಪ್ರಗತಿ ಸಾಧಿಸಿದೆ.
10 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ಈಗ ಸಿದ್ದಗಂಗಾ ಮಠವು 10,000 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ಯಾವುದೇ ಜಾತಿ, ಧರ್ಮದ ಭೇದಭಾವವಿಲ್ಲದೆ ಶಿಕ್ಷಣವನ್ನು ನೀಡುತ್ತಿರುವ ವಿಶಿಷ್ಟ ಗುರುಕುಲವಾಗಿದೆ. ಮಠವು ವಿವಿಧ ಸ್ಥಳಗಳಲ್ಲಿ ಅಂಧ ಶಾಲೆಗಳನ್ನು ನಡೆಸುತ್ತಿದೆ ಮತ್ತು 100 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಸ್ವತಂತ್ರ ಹಾಸ್ಟೆಲ್ ಸೌಲಭ್ಯ ಸಹಿತ ಉಚಿತ ಶಿಕ್ಷಣ ಮತ್ತು ಆಹಾರವನ್ನು ನೀಡಲಾಗುತ್ತದೆ.
ಇದನ್ನೂಓದಿ:ಪಕ್ಷೇತರ ಅಭ್ಯರ್ಥಿಯಾಗಿ ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀ ನಾಮಪತ್ರ ಸಲ್ಲಿಕೆ