ತುಮಕೂರು: ಮಳೆ ಬಾರದ ಹಿನ್ನೆಲೆಯಲ್ಲಿ ಮಾವಿನ ಬೆಲೆ ಕಡಿಮೆಯಾಗಿರುವುದರಿಂದ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಂಯುಕ್ತಾಶ್ರಯದಲ್ಲಿ ಜೂನ್ 1 ರಿಂದ 5 ರವರೆಗೆ ಐದು ದಿನಗಳ ಕಾಲ ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಸಸ್ಯ ಸಂತೆ ಮೇಳವನ್ನು ಆಯೋಜನೆ ಮಾಡಲಾಗಿದೆ.
ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ಮಳೆ ಬಾರದ ಹಿನ್ನೆಲೆಯಲ್ಲಿ ಮಾವನ್ನು ಬೆಳೆಯುವ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಗುಬ್ಬಿ ತಾಲೂಕಿನ ಚೇಳೂರು ಮಾರುಕಟ್ಟೆ ಹೆಚ್ಚು ಹಲಸು ಬರುತ್ತದೆ. ಮಾವಿನ ಬೆಲೆ ಕಡಿಮೆಯಾಗಿರುವುದರಿಂದ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಲಿದೆ ಈ ಮೇಳದ ಸದುಪಯೋಗವನ್ನು ರೈತರು ಮತ್ತು ಎಲ್ಲಾ ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್ ಮಾತನಾಡಿ, ಐದು ದಿನಗಳ ಕಾಲ ಮಾವು ಮತ್ತು ಹಲಸು ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ಮರದಲ್ಲಿಯೇ ಹಣ್ಣಾದಂತೆ ಹಲಸು ಮತ್ತು ಮಾವನ್ನು ನೇರವಾಗಿ ಮಾರಾಟ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೇಳದಲ್ಲಿ ವಿವಿಧ ರೀತಿಯ ಮಾವಿನ ಹಣ್ಣನ್ನು ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಹಣ್ಣುಗಳನ್ನು ಖರೀದಿಸುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.