ತುಮಕೂರು: ಸಿದ್ದಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿದ್ದಲಿಂಗ ಸ್ವಾಮಿಯ ಮಹಾರಥೋತ್ಸವ ನೆರವೇರಿತು.
ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ಮಹಾರಥೋತ್ಸವ ಆಯೋಜನೆ ಮಾಡಲಾಗುತ್ತದೆ. ವಿಧಿ ವಿಧಾನಗಳಂತೆ ಮಂತ್ರಘೋಷಗಳೊಂದಿಗೆ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ಮುಂಭಾಗದಿಂದ ಹೊರಟ ರಥೋತ್ಸವಕ್ಕೆ ಹತ್ತಕ್ಕೂ ಹೆಚ್ಚು ಪುರೋಹಿತರು ಪೂಜೆ ನೆರವೇರಿಸಿದರು.
ನಂತರ ಮಠದ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಬೃಹತ್ ರಥವನ್ನು ಎಳೆದು ಪುನೀತರಾದರು. ರಥೋತ್ಸವದಲ್ಲಿ ಮಠದ ಮಕ್ಕಳು ವಿವಿಧ ವಾದ್ಯಗಳನ್ನು ನುಡಿಸಿದರೆ, ಕಲಾ ತಂಡಗಳು ವಿವಿಧ ಕಲೆಗಳನ್ನು ಪ್ರದರ್ಶಿಸಿದವು. ಮಠದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು. ಸುಮಾರು 1 ಗಂಟೆ ಕಾಲ ನಡೆದ ಮಹಾರಥೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಜರಿದ್ದರು.