ತುಮಕೂರು: ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗುವ ಪರಿಸ್ಥಿತಿ ರೂಪುಗೊಳ್ಳಬೇಕು. ಇಂದಿನ ಕಾಲಘಟ್ಟಕ್ಕೆ ಕಾನೂನಿನ ತಿದ್ದುಪಡಿಯಾಗಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಿಶಾ ಪ್ರಕರಣದಲ್ಲಿ ಆರೋಪಿಗಳ ಮೇಲೆ ಹೈದರಾಬಾದ್ ಪೊಲೀಸರು ನಡೆಸಿದ ಎನ್ಕೌಂಟರ್ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಐಪಿಸಿ ಕಾಯ್ದೆಯನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕಿದೆ. ಯಾಕಂದ್ರೆ, ತಿದ್ದುಪಡಿ ವಿಚಾರಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. 1860ರಲ್ಲಿ ಆಗಿರುವಂತಹ ಐಪಿಸಿ, ಸಿಆರ್‌ಪಿಸಿ ಕಾಯ್ದೆಯಲ್ಲಿ ಯಾವುದೇ ಸತ್ವ ಇಲ್ಲದಾಗಿದ್ದು, ಅದರ ತಿದ್ದುಪಡಿಯಾಗಬೇಕು ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.
ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ 1,000 ರೂ ದಂಡ ಎಂದು ಕಾನೂನಿನಲ್ಲಿದೆ. ಈ 1,000 ರೂ ದಂಡವನ್ನು ಆರೋಪಿಗಳು ಖುಷಿಯಾಗಿ ಕೊಟ್ಟು ಹೋಗುತ್ತಾರೆ. ಹಾಗಾಗಿ ಕಾನೂನು ಬಿಗಿಯಾಗಬೇಕಿದೆ. ಈ ಬಗ್ಗೆ ನಾವು ಚರ್ಚೆ ಮಾಡಿ ಕಾನೂನು ತಿದ್ದುಪಡಿ ಮಾಡುವಂತೆ ಸಂಸತ್ತಿಗೆ ಸಲಹೆ ನೀಡುತ್ತೇವೆ. ಅಲ್ಲದೇ ರಾಜ್ಯದಿಂದ ಕೇಂದ್ರಕ್ಕೆ ಕಾನೂನು ತಿದ್ದುಪಡಿಗೆ ಈಗಾಗಲೇ ಶಿಫಾರಸ್ಸು ಮಾಡಲಾಗಿದೆ, ಅತ್ಯಾಚಾರಿಗಳಿಗೆ ತಕ್ಷಣ ಕಠಿಣ ಶಿಕ್ಷೆಯಾಗುವ ಸ್ಥಿತಿ ಬಾರದೇ ಹೋದರೆ ಮುಂದಿನ ದಿನಗಳನ್ನು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ನಾವು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದರು. ಇನ್ನು, ರಾಜ್ಯದಲ್ಲಿ ಇಂತಹ ಪ್ರಕರಣ ನಡೆಯಲು ಬಿಡುವುದಿಲ್ಲ. ನಾನು ಮತ್ತು ಗೃಹ ಸಚಿವರು ಸದಾ ಸಂಪರ್ಕದಲ್ಲಿದ್ದು, ಮುಖ್ಯವಾಗಿ ಬೆಂಗಳೂರು ನಗರವನ್ನು ಮಾನಿಟರಿಂಗ್ ಮಾಡುತ್ತಿದ್ದೇವೆ ಎಂದರು.
ತುಮಕೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ನನಗೆ ಸ್ಪಷ್ಟವಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ತಿಳಿದಿಲ್ಲ. ಈ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದು, ಪ್ರತಿಯೊಂದು ವಿಷಯದ ಬಗ್ಗೆ ಮುಕ್ತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ರು.
ರಾಜ್ಯದಲ್ಲಿ ನಡೆದ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿ, ಶೇ 100ರಷ್ಟು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿರುತ್ತೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ನಡೆಸುವ ಸರ್ಕಾರ ಬೇಕಿದೆ. ಆ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕಾರ್ಯೋನ್ಮುಖವಾಗಿದೆ. ನಾನು ಯಾವುದೇ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ, ನಮ್ಮೆಲ್ಲರಿಗಿಂತ ರಾಜ್ಯದ ಜನತೆ ಬುದ್ದಿವಂತರು ಎಂದು ಹೇಳಿದ್ರು.