ತುಮಕೂರು: ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ನಡೆದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಅಪಘಾತದಲ್ಲಿ 13 ಮಂದಿ ಗಾಯಗೊಂಡು ಬಸ್ ಚಾಲಕ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದೆ.
ಲಾರಿಗೆ ಕೆಎಸ್ಆರ್ಟಿಸಿ ಡಿಕ್ಕಿಯಾಗಿ, ಬಸ್ ಚಾಲಕ ಅಬ್ದುಲ್ ಸಲಾಂ (59) ಮೃತಪಟ್ಟಿದ್ದಾರೆ. ಮುಂಜಾನೆ ಸುಮಾರು 4ಗಂಟೆಯಲ್ಲಿ ಅಪಘಾತ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ತುಮಕೂರು ಜಿಲ್ಲಾ ಆಸ್ಪತ್ರೆ ಹಾಗೂ ಶಿರಾ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆಯ ಹಿನ್ನೆಲೆ:
ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತಿದ್ದ ಲಾರಿಯ ಚಾಲಕ ಏಕಾಏಕಿ ಎಡಭಾಗಕ್ಕೆ ತಿರುಗಿಸಿದ್ದಾನೆ. ಹಿಂಬದಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಇದ್ದಕಿದ್ದಂತೆ ಲಾರಿ ಎಡಕ್ಕೆ ಬಂದ ಪರಿಣಾಮ ಗಾಬರಿಗೊಂಡು ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಸ್ಟೇರಿಂಗ್ ಅಡಿ ಸಿಲುಕಿ ಬಸ್ ಚಾಲಕ ಅಬ್ದುಲ್ ಸಲಾಂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಈ ವೇಳೆ, ಚಾಲಕನನ್ನು ಹೊರತೆಗೆಯಲು ಪೊಲೀಸರು - ಹೈವೇ ಸಿಬ್ಬಂದಿ ಸತತ ಪ್ರಯತ್ನ ನಡೆಸಿದರು. ಲಾರಿ ಚಾಲಕನ ಯಡವಟ್ಟಿನಿಂದ ಈ ಅವಘಡ ಸಂಭವಿಸಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.