ತುಮಕೂರು: ಪ್ರಸ್ತುತ ಸಮಾಜದಲ್ಲಿ ಸತ್ಯವನ್ನು ಸುಳ್ಳು ಎಂದು ಬಿಂಬಿಸಲಾಗುತ್ತಿದೆ. ವಾಸ್ತವವನ್ನು ಪರಿಶೀಲಿಸದೇ ಅದನ್ನೇ ವಿಭಿನ್ನವಾಗಿ ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮಂಡ್ಯದ ಕರ್ನಾಟಕ ಸಂಘದ ವತಿಯಿಂದ ನಡೆದ ವೈಕೆ ರಾಮಯ್ಯ ಕೃಷಿಕ, ಕೃಷಿ ವಿಜ್ಞಾನಿ, ಸಹಜ ಬೇಸಾಯ ವಿಶೇಷ ತಜ್ಞ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಉತ್ತಮ ನಾಯಕರಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುವುದಿಲ್ಲ. ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅಂತಹ ನಾಯಕರೊಬ್ಬರ ಅವಶ್ಯಕತೆ ಇದೆ ಎಂದರು.
ಇಂತಹದ್ದಕ್ಕೆ ಪರಿಹಾರ ಕಂಡು ಹಿಡಿಯಲು ಜನಪ್ರತಿನಿಧಿಗಳು ಮುಂದಾಗಬೇಕಿದೆ. ಅಂತಹ ವ್ಯವಸ್ಥೆ ಜಾರಿಗೆ ಬರಬೇಕಿದೆ. ಈ ಹಿಂದೆ ವೈಕೆ ರಾಮಯ್ಯ ಅವರು ಇದ್ದಂತಹ ಸಂದರ್ಭದಲ್ಲಿ ಈ ರೀತಿಯಾದ ಗೊಂದಲಗಳು ಸೃಷ್ಟಿಯಾಗುತ್ತಿರಲಿಲ್ಲ ಎಂದು ನೆನಪಿಸಿಕೊಂಡರು.
ವೈಕೆ ರಾಮಯ್ಯ ಕೃಷಿ ವಿಜ್ಞಾನಿ ಪ್ರಶಸ್ತಿಯನ್ನು ಡಾ. ಎಸ್ ರಾಜೇಂದ್ರ ಪ್ರಸಾದ್, ವೈ.ಕೆ. ರಾಮಯ್ಯ ಸಹಜ ಬೇಸಾಯ ವಿಶೇಷ ತಜ್ಞ ಪ್ರಶಸ್ತಿಯನ್ನು ಎಚ್ ಮಂಜುನಾಥ್, ವೈ ಕೆ ರಾಮಯ್ಯ ಕೃಷಿಕ ಪ್ರಶಸ್ತಿಯನ್ನು ಸೋಮಶೇಖರ್ ಹುಲಿಯಾಪುರ ಅವರಿಗೆ ನೀಡಲಾಯಿತು.