ತುಮಕೂರು: ಚಿರತೆಯೊಂದು ಗ್ರಾಮದೊಳಗೆ ನುಗ್ಗಿ ಪಾಳುಬಿದ್ದ ಮನೆಯ ಬಳಿ ಜಾನುವಾರುಗಳಿಗೆ ಹೊಂಚು ಹಾಕುತ್ತಿದ್ದ ದೃಶ್ಯವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.
ಕುಣಿಗಲ್ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಈ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಮೂಡಿಸಿದೆ. ಗ್ರಾಮದಲ್ಲಿರುವ ಪಾಳುಬಿದ್ದ ಕಟ್ಟಡದ ಬಳಿ ಕುಳಿತಿದ್ದ ಚಿರತೆ ಕಂಡು ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಗ್ರಾಮಸ್ಥರ ಓಡಾಟ ಕಂಡ ಚಿರತೆಯು ಸ್ಥಳದಿಂದ ನಿಧಾನವಾಗಿ ಪಕ್ಕದಲ್ಲಿದ್ದ ಪೊದೆಯೊಳಗೆ ಕಣ್ಮರೆಯಾಗಿದೆ. ಹಾಡಹಗಲೇ ಚಿರತೆ ಈ ರೀತಿ ಗ್ರಾಮದಲ್ಲಿ ಓಡಾಡುತ್ತಿರುವುದನ್ನು ಕಂಡ ಜನರು ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ.
ತುಮಕೂರು ಹಾಗೂ ಕುಣಿಗಲ್ ತಾಲೂಕುಗಳಲ್ಲಿ ಹಲವು ದಿನಗಳಿಂದ ಚಿರತೆಗಳು ಓಡಾಡುತ್ತಿವೆ. ಈಗಾಗಲೇ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಇತ್ತೀಚಿಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿತ್ತು. ಇದೀಗ ಮತ್ತೊಂದು ಚಿರತೆ ಹಾಡಹಗಲೇ ಓಡಾಡುತ್ತಿರುವುದು ಜನರ ನಿದ್ದೆಗೆಡಿಸಿದೆ.