ತುಮಕೂರು : ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಇನ್ನೂ ಕಾಂಗ್ರೆಸ್ ಅಧಿಕೃತವಾಗಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಿಲ್ಲ. ಆದರೆ, ತುಮಕೂರಿನಲ್ಲಿ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಮಗ ಆರ್. ರಾಜೇಂದ್ರ ಇಂದು ನಾಮಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಅಧಿಕೃವಾಗಿ ನನಗೆ ಬಿ ಫಾರಂ ನೀಡಿಲ್ಲ. ಬಿ ಫಾರಂ ಜೊತೆಯಲ್ಲಿ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ಈವರೆಗೂ ಯಾರಿಗೂ ಬಿ ಫಾರಂ ನೀಡಿಲ್ಲ. ಇಂದು ದಿನ ಚೆನ್ನಾಗಿದೆ ಎಂದು ನಾನು ನಾಮಪತ್ರ ಸಲ್ಲಿಸಿದ್ದೇನೆ. ನ.23ರಂದು ಪರಮೇಶ್ವರ್, ಡಿ.ಕೆ.ಸುರೇಶ್, ಶಫಿ ಅಹಮದ್ ಅವರೊಂದಿಗೆ ಸೇರಿ ಬಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು.
ಈಗಾಗಲೇ ಕಳೆದ ಎರಡು ತಿಂಗಳಿನಿಂದ ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿ ಅವರ ಸಂಪರ್ಕದಲ್ಲಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ನಾನು ಪರಾಭವಗೊಂಡಿದ್ದೇನೆ. ಅದರ ಅನುಕಂಪ ನನ್ನ ಮೇಲೆ ಇದೆ. ಜಿಲ್ಲೆಯಲ್ಲಿನ ಕಾಂಗ್ರೆಸ್ ಮುಖಂಡರ ಒಗ್ಗಟ್ಟು ಮತ್ತು ಪಕ್ಷಾತೀತವಾಗಿ ಮತದಾರರು ನನ್ನ ಬೆಂಬಲಕ್ಕೆ ಇದ್ದಾರೆ ಎಂದರು.