ತುಮಕೂರು : ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿಧಿ ಆಸೆಗೆ ತಾಯಿಯೇ ತನ್ನ ಮಗಳನ್ನು ಬಲಿಕೊಡಲು ಮುಂದಾಗಿರುವ ಆರೋಪ ಕೇಳಿ ಬಂದಿದ್ದು, ರಕ್ಷಣೆ ನೀಡುವಂತೆ ಮಗಳು ಪೊಲೀಸರ ಮೊರೆ ಹೋಗಿದ್ದಾಳೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಅವರೆಗೆರೆಯಲ್ಲಿ ಈ ರೀತಿಯ ಅಪರೂಪದ ಪ್ರಕರಣ ನಡೆದಿದೆ. ಅವರೆಗೆರೆಯ ನಿವಾಸಿ ಲಕ್ಷ್ಮಿ ಎಂಬಾಕೆ ಸ್ವತಃ ತನ್ನ ಮಗಳನ್ನು ನಿಧಿ ಆಸೆಗಾಗಿ ಬಲಿಕೊಡಲು ಮುಂದಾಗಿದ್ದಾಳಂತೆ. ಹೀಗೆಂದು, ಸ್ವತಃ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಮಗಳನ್ನು ಬಲಿಕೊಟ್ಟರೆ ಅಪಾರ ಪ್ರಮಾಣದ ನಿಧಿ ಸಿಗುತ್ತದೆ. ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿ ಆಗಬಹುದು ಎಂದು ಮಾಂತ್ರಿಕನೊಬ್ಬ ನನ್ನ ತಾಯಿಗೆ ಹೇಳಿದ್ದಾನೆ. ಹಾಗಾಗಿ, ನನ್ನನ್ನು ಬಲಿಕೊಡಲು ಅಮ್ಮ ಮುಂದಾಗಿದ್ದಾಳೆ. ನನಗೆ ರಕ್ಷಣೆ ಕೊಡಿ ಎಂದು ತನ್ನ ಪತಿಯೊಂದಿಗೆ ಆಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮನವಿ ಮಾಡಿಕೊಂಡಿದ್ದಾಳೆ.
ಪ್ರಕರಣದ ಹಿನ್ನೆಲೆ : ಗ್ರಾಮದಲ್ಲಿ ಲಕ್ಷ್ಮಿ ಕುಟುಂಬಕ್ಕೆ ಸೇರಿದ ಜಮೀನಿದೆ. ಅದರಲ್ಲಿ ಒಂದು ಹುತ್ತ ಇದ್ದು, ಆ ಹುತ್ತಕ್ಕೆ ಅನೇಕ ವರ್ಷಗಳಿಂದ ಲಕ್ಷ್ಮಿ ಕುಟುಂಬ ಪೂಜೆ ಸಲ್ಲಿಸಿಕೊಂಡು ಬಂದಿದೆ. ಮೂರ್ನಾಲ್ಕು ವರ್ಷದ ಹಿಂದೆ ಹುತ್ತ ಅಗೆದಾಗ ದೇವರ ವಿಗ್ರಹ, ಬೆಳ್ಳಿ ನಾಣ್ಯಗಳು ಸಿಕ್ಕಿದ್ದವಂತೆ. ಆ ಹುತ್ತದಲ್ಲಿ ಇನ್ನೂ ಚಿನ್ನದ ನಾಣ್ಯಗಳಿದ್ದು, ಮಗಳನ್ನು ಬಲಿ ಕೊಟ್ಟರೆ ಆ ನಾಣ್ಯಗಳು ಸಿಗುತ್ತವೆ ಎಂದು ತಮಿಳುನಾಡಿನ ಮಾಂತ್ರಿಕನೋರ್ವ ಲಕ್ಷ್ಮಿಗೆ ತಿಳಿಸಿದ್ದಾನಂತೆ. ಮಾಂತ್ರಿಕನ ಮಾತು ನಂಬಿ ನಿಧಿ ಆಸೆಗಾಗಿ ಲಕ್ಷ್ಮಿ ತನ್ನ ಮಗಳ ಮೇಲೆಯೇ ಮಾಟ ಮಂತ್ರ ಮಾಡಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಅಮವಾಸ್ಯೆ, ಹುಣ್ಣಿಮೆ ಬಂದಾಗ ಅಮ್ಮ ನನ್ನನ್ನು ಹುತ್ತದ ಬಳಿ ಕರೆದುಕೊಂಡು ಹೋಗುತ್ತಾಳೆ. ಇದರಿಂದ ನನಗೆ ಭಯವಾಗ್ತಿದೆ, ರಕ್ಷಣೆ ಕೊಡಿ ಎಂದು ಮಹಿಳೆ ಕಮಿಷನರ್ಗೆ ಮನವಿ ಮಾಡಿದ್ದಾಳೆ.
ಲಕ್ಷ್ಮಿ ಮಗಳಿಗೆ ಈಗಾಗಲೇ ಕಾರ್ತಿಕ್ ಎಂಬವರ ಜೊತೆ ಲವ್ ಮ್ಯಾರೇಜ್ ಆಗಿದೆ. ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಆಕೆ ನೀಡಿರುವ ದೂರನ್ನು ಸ್ವೀಕರಿಸಿರುವ ಎಸ್ಪಿ ರಾಹುಲ್ ಕುಮಾರ್, ತನಿಖೆಗಾಗಿ ಮಹಿಳಾ ಠಾಣೆಗೆ ದೂರನ್ನು ವರ್ಗಾಯಿಸಿದ್ದಾರೆ.
8 ತರಗತಿ ಇರುವಾಗಲೇ ಕೊಲೆಗೆ ಯತ್ನಿಸಿದ್ದರು
ಅಮವಾಸ್ಯೆ ಹುಣ್ಣಿಮೆ ದಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ತಾಯಿ ಲಕ್ಷ್ಮೀ ವಾಮಾಚಾರ ಮಾಡಿಸಿದ್ದಾಳೆ ಎಂದು ಮಗಳು ಆರೋಪಿಸಿದ್ದಾಳೆ. ಅಳಿಯ ಕಾರ್ತಿಕ್ ಅನ್ನೂ ಕೊಲೆ ಮಾಡಲು ಲಕ್ಷ್ಮಿ ಯತ್ನಿಸಿದ್ದಾಳೆ. ಆಕೆ ಮಗಳು 8ನೇ ತರಗತಿ ಓದುತ್ತಿದ್ದಾಗಲೇ ನಿಧಿಗಾಗಿ ಕೊಲೆ ಮಾಡಲು ಯತ್ನಿಸಿದ್ದರು. ಆದರೆ, ಆಕೆ ತಪ್ಪಿಸಿಕೊಂಡಿದ್ದಳು ಎಂದು ಹೇಳಲಾಗ್ತಿದೆ.
ರಕ್ಷಣೆಗಾಗಿ ಪ್ರೀತಿಸಿ ಮದುವೆ
ಮದುವೆಯಾದರೆ ಗಂಡನಿಂದ ತನಗೆ ರಕ್ಷಣೆ ದೊರೆಯಬಹುದು ಎಂದು ಯುವತತಿ ಕಾರ್ತಿಕ್ನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈಗ ಯುವತಿ, ಆಕೆಯ ಗಂಡ ಮತ್ತು ಮಗುವನ್ನೂ ತಾಯಿ ಲಕ್ಷ್ಮಿ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎಂದು ಆರೋಪಿಸಲಾಗಿದೆ.