ತುಮಕೂರು : ಕುಣಿಗಲ್ ತಾಲೂಕಿನಲ್ಲಿರುವ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲ ತಾಲೂಕಿಗೆ ಅವೈಜ್ಞಾನಿಕ ಕಾಮಗಾರಿ ಮೂಲಕ ನೀರು ತೆಗೆದುಕೊಂಡು ಹೋಗುವ ಯೋಜನೆ ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಕುಣಿಗಲ್ ಬಂದ್ ಯಶಸ್ವಿಯಾಗಿದೆ.
ರೈತ ಸಂಘ, ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಮುಖಂಡರು ಬಂದ್ಗೆ ಬೆಂಬಲ ನೀಡಿದ್ದರು.
ಬೆಳಗ್ಗೆಯಿಂದಲೂ ರೈತ ಸಂಘದ ಕಾರ್ಯಕರ್ತರು ಕುಣಿಗಲ್ ಪಟ್ಟಣದಾದ್ಯಂತ ಬೈಕ್ ರ್ಯಾಲಿ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಬೆಳ್ಳಂಬೆಳಗ್ಗೆ ರಸ್ತೆಗಿಳಿಯಲು ಸಜ್ಜಾಗಿದ್ದ ಖಾಸಗಿ ಬಸ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಿಗೆ ಪ್ರತಿಭಟನಾಕಾರರು ಮನವರಿಕೆ ಮಾಡಿ ಬಸ್ಗಳು ರಸ್ತೆಗಿಳಿಯದಂತೆ ನೋಡಿಕೊಂಡರು.
ಕುಣಿಗಲ್ನ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ರೈತ ಸಂಘದ ಮುಖಂಡ ಆನಂದ್ ಪಟೇಲ್, ಕುಣಿಗಲ್ ಶಾಸಕ ಡಾ. ರಂಗನಾಥ್, ಜೆಡಿಎಸ್ ಮಾಜಿ ಶಾಸಕ ಡಿ. ನಾಗರಾಜಯ್ಯ ಸೇರಿದಂತೆ ವಿವಿಧ ಮಠಾಧೀಶರು, ಕನ್ನಡಪರ ಸಂಘಟನೆ ಮುಖಂಡರು ಭಾಗವಹಿಸಿದ್ದರು.