ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಾಜ್ಯ ಯುವ ಬರಹಗಾರರ ಒಕ್ಕೂಟದ ವತಿಯಿಂದ ನಗರದ ಕನ್ನಡ ಭವನದಲ್ಲಿ ಸಾಧಕರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದೆ ಪದ್ಮಶ್ರೀ ಡಾ. ಬಿ.ಜಯಶ್ರೀ, ನನ್ನ ಜೀವನ ತೆರೆದ ಪುಸ್ತಕದಂತೆ. ಅದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಜೀವನದಲ್ಲಿ ಎಲ್ಲರೂ ಕಷ್ಟಗಳನ್ನು ಅನುಭವಿಸುತ್ತಾರೆ. ಕಷ್ಟಗಳನ್ನು ನಿಭಾಯಿಸಿಕೊಂಡು ಹೋಗುವವರೇ ಮನುಷ್ಯರು. ಅದಕ್ಕಾಗಿಯೇ ಪ್ರತಿಯೊಬ್ಬರು ಮೊದಲು ಹೇಗೆ ಬದುಕಬೇಕು ಎಂಬುದನ್ನು ಕಲಿಯಬೇಕು. ಪ್ರತಿಯೊಬ್ಬರಲ್ಲಿಯೂ ಒಂದೊಂದು ಆಸೆ ಇರುತ್ತದೆ. ಅದನ್ನು ಹುಡುಕಿ. ಅದು ಕಲೆ, ಶಿಕ್ಷಣ, ಚಿತ್ರಕಲಾ ವಿಭಾಗ, ನೃತ್ಯ, ನಟನೆ ಹೀಗೆ ಯಾವುದೇ ಕ್ಷೇತ್ರ ಆಗಿರಬಹುದು. ಬದುಕಲು ಬೇಕಾಗುವ ಮಾರ್ಗವನ್ನು ಆರಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಜ್ಯೋತಿಗಣೇಶ್, ತುಮಕೂರು ಜಿಲ್ಲೆ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ದೇಶಕ್ಕೆ ಹೆಸರುವಾಸಿಯಾಗಿದೆ ಎಂದರೆ ಅದು ಡಾ. ಗುಬ್ಬಿ ವೀರಣ್ಣ ಅವರ ಕಲಾ ಕುಟುಂಬದಿಂದ. ಹೆಸರಾಂತ ಸಿನಿಮಾ ನಟರನ್ನು ಪರಿಚಯಿಸಿದ್ದು ಗುಬ್ಬಿ ವೀರಣ್ಣನವರ ರಂಗ ಕಲಾ ಸಂಘದಿಂದ ಎಂಬುದನ್ನು ಯಾರೂ ಮರೆತಿಲ್ಲ. ಆ ಕುಟುಂಬದಿಂದ ಬಂದು ಕಲೆಯನ್ನೇ ಕಸುಬಾಗಿಸಿಕೊಂಡು ಕೀರ್ತಿ ಪತಾಕೆ ಹಾರಿಸಿದವರೆಂದರೆ ಬಿ.ಜಯಶ್ರೀ ಎಂದರು.
ಇನ್ನು, ಬೆಂಗಳೂರು, ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ರಂಗಾಯಣಗಳಿವೆ. ಆದರೆ ಗುಬ್ಬಿ ವೀರಣ್ಣ ಎಂದು ಹೆಸರುವಾಸಿಯಾಗಿರುವ ತುಮಕೂರಿನಲ್ಲಿ ರಂಗಾಯಣ ಸ್ಥಾಪನೆಯಾಗಬೇಕು. ಅದು ಬಿ.ಜಯಶ್ರೀ ಅವರ ಹೆಸರಿನಲ್ಲಿ. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಅವರನ್ನು ಒತ್ತಾಯ ಮಾಡಲಾಗುವುದು ಎಂದರು.