ತುಮಕೂರು: ಡಿ.19 ರಿಂದ 27ರವರೆಗೆ 9 ದಿನಗಳ ಕಾಲ ಶ್ರೀ 1008 ಕಲ್ಪದ್ರುಮ ಮಹಾಮಂಡಲ ಆರಾಧನೆ ಮತ್ತು ವಿಶ್ವಶಾಂತಿ ಮಹಾಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಅಮೋಘ ಕೀರ್ತಿ ಮಹಾರಾಜರು ತಿಳಿಸಿದರು.
ಜೈನಧರ್ಮದಲ್ಲಿ ಕಲ್ಪದ್ರುಮ ಮಹಾಮಂಡಲ ಆರಾಧನೆ ಮತ್ತು ವಿಶ್ವಶಾಂತಿ ಮಹಾಯಜ್ಞವನ್ನು ಚಕ್ರವರ್ತಿಗಳು ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಸಮವಸರಣದ ಆರಾಧನೆ ನಡೆಯುತ್ತದೆ. ಇದರಲ್ಲಿ ಪಾಲ್ಗೊಳ್ಳುವ ತೀರ್ಥಂಕರರ ಆರಾಧನೆಯನ್ನು ಕಲ್ಪದ್ರುಮ ಆರಾಧನೆ ಎಂದು ಕರೆಯಲಾಗುತ್ತದೆ. ಈ ಆರಾಧನೆಯನ್ನು ನಗರದ ಅಮಾನಿಕೆರೆ ಬಳಿ ಇರುವ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಡಿ.19ರಿಂದ 27ರವರೆಗೆ 9 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
ಈ ಆರಾಧನೆಯಿಂದ ಸಮಾಜದಲ್ಲಿ ಸುಖ, ಸಂತೋಷ, ಸಮೃದ್ಧಿ, ಶಾಂತಿ ಮತ್ತು ಸಂಸ್ಕಾರಗಳ ಉಪಾಸನೆಯಾಗುತ್ತದೆ. ಈ ರೀತಿಯ ಆರಾಧನೆ 2016ರಲ್ಲಿ ಅಮೋಘ ಕೀರ್ತಿ ಮಹಾರಾಜರ ನೇತೃತ್ವದಲ್ಲಿ ಮುಂಬೈನಲ್ಲಿ ನಡೆಸಲಾಗಿತ್ತು. ಈಗ ತುಮಕೂರಿನಲ್ಲಿ ನಡೆಸಲಾಗುತ್ತಿದೆ ಎಂದು ಅಮೋಘ ಕೀರ್ತಿ ಮಹಾರಾಜರು ತಿಳಿಸಿದರು.