ತುಮಕೂರು: ದೇವೇಗೌಡರು ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಗೊಂದಲದಲ್ಲಿದ್ದ ಸಂದರ್ಭದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಕನಸಿನಲ್ಲಿ ಬಂದು ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದರಂತೆ.
ಹೌದು, ಈ ವಿಷಯವನ್ನು ಸ್ವತಃ ದೇವೇಗೌಡರು ತುಮಕೂರು ತಾಲೂಕು ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದ ಲಕ್ಷ್ಮೀನರಸಿಂಹಸ್ವಾಮಿ ದೇಗುಲ ಉದ್ಘಾಟನೆ ಕಾರ್ಯಕ್ರಮದ ವೇಳೆ ತಮ್ಮ ಅನುಭವವನ್ನು ಹಂಚಿಕೊಂಡರು. ಹೊಳೆನರಸೀಪುರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಅನೇಕ ಮಂದಿ ಒತ್ತಡ ಹೇರಿದ್ದರು. ಆದರೆ ಸಾಕಷ್ಟು ಆರ್ಥಿಕ ಸಂಕಷ್ಟದಿಂದ ನಾನು ಬಳಲಿದ್ದೆ. ಹೀಗಿದ್ದರೂ ಒತ್ತಡ ಹೆಚ್ಚಾಗಿತ್ತು. ಬೆಂಬಲಿಗರನ್ನು ಮಾರನೇ ದಿನ ಬರುವಂತೆ ತಿಳಿಸಿದ್ದೆ. ಅಂದು ಬೆಳಗಿನ ಜಾವ ಸುಮಾರು 5.10ರ ವೇಳೆಗೆ ಕನಸಿನಲ್ಲಿ ಬಂದ ಲಕ್ಷ್ಮೀನರಸಿಂಹಸ್ವಾಮಿ ಆಶೀರ್ವಾದ ಮಾಡಿದ್ದರು ಎಂದು ತಿಳಿಸಿದರು.
ನನ್ನ ಪತ್ನಿಯ ಜೊತೆ ಈ ವಿಷಯವನ್ನು ಚರ್ಚಿಸಿದೆ. ಅದಕ್ಕೆ ಆಕೆ ಯಾರಿಗೂ ಹೆದರಬೇಡಿ ಚುನಾವಣೆಗೆ ಸ್ಪರ್ಧಿಸಿ ಎಂದು ಧೈರ್ಯ ಹೇಳಿದಳು. ನಂತರ 1962ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದೆ ಎಂದರು. ಜೆಡಿಎಸ್ ಪಕ್ಷವನ್ನು ಯಾರು ತೆಗೆಯಲು ಸಾಧ್ಯವಿಲ್ಲ. ದೈವಾನುಗ್ರಹವಿದೆ. ಪ್ರಧಾನ ಮಂತ್ರಿ ಪಟ್ಟದಲ್ಲಿ ಭಗವಂತ ಆಸೆಪಟ್ಟು ಕರೆದುಕೊಂಡು ಹೋಗಿ ಕೂರಿಸಿದ್ದ. 10 ತಿಂಗಳು ಆ ಸ್ಥಾನ ಅಲಂಕರಿಸಿದ್ದೆ ಎಂದು ದೇವೇಗೌಡರು ಹಳೆಯದನ್ನು ಸ್ಮರಿಸಿದರು.
ಓದಿ: ಕಳೆದ ಮೂರು ವರ್ಷಗಳಿಂದ ಮೈಸೂರು ಪಾಲಿಕೆಯಲ್ಲಿ ಮೈತ್ರಿ ಇತ್ತು: ಎಚ್.ಡಿ. ದೇವೇಗೌಡ