ತುಮಕೂರು: ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಬಿರುಸಿನ ತಂತ್ರಗಾರಿಕೆ ನಡೆಯುತ್ತಿದೆ. ಆದರೆ, ಪ್ರಾದೇಶಿಕ ಪಕ್ಷ ಜೆಡಿಎಸ್ನಲ್ಲಿ ಮಾತ್ರ ನಾವಿಕನಿಲ್ಲದ ಹಡಗಾಗುತ್ತಿದೆಯೇ ಎಂಬ ಆತಂಕ ಕಾರ್ಯಕರ್ತರಲ್ಲಿ ಮನೆ ಮಾಡಿದೆ.
ಹಾಸನ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಕಂಡು ಕೊಂಡಿರುವಂತೆ ಜಿಲ್ಲೆಯಲ್ಲಿಯೂ ಜೆಡಿಎಸ್ ಭದ್ರ ಬುನಾದಿ ಹಾಕಿಕೊಂಡಿದೆ. ಆದರೆ, ಜೆಡಿಎಸ್ ವರಿಷ್ಠ ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಇಲ್ಲಿಂದ ನಿಂತು ಪರಾಭವಗೊಂಡ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಛಾಪು ಮೂಡಿಸಲು ವಿಫಲವಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜೆಡಿಎಸ್ ಕಟ್ಟಾಳು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರತೊಡಗಿದೆ.
ಈ ಇಬ್ಬರು ಪ್ರಮುಖ ನಾಯಕರ ವಲಸೆ ಹೋಗುವ ಮನಸ್ಥಿತಿಯಿಂದ ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್ ತೀವ್ರ ಹಿನ್ನಡೆ ಅನುಭವಿಸುವ ಸಾಧ್ಯತೆ ಹೆಚ್ಚಳವಾಗಿದೆ. ಇವರಿಬ್ಬರ ಹಿಂದೇಟಿನಿಂದಾಗಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಗೆ ಹೇಗೆ ತಯಾರಿ ನಡೆಸಬೇಕು ಎಂದು ತಲೆಕೆಡಿಸಿಕೊಳ್ಳುವಂತಾಗಿದೆ. ಆದರೆ, ಶಾಸಕ ಶ್ರೀನಿವಾಸ್ ಮಾತ್ರ ತಾನು ಜೆಡಿಎಸ್ ಪಕ್ಷದಲ್ಲೇ ಇರ್ತಿನಿ ಎಂದು ಒಲ್ಲದ ಮನಸ್ಸಿನಿಂದ ಹೇಳುತ್ತಾರೆ.
ಜಿಪಂ,ತಾಪಂ ಚುನಾವಣೆ ಮುಂದಿನ ವಿಧಾನ ಸಭಾ ಚುನಾವಣೆಯ ದಿಕ್ಸೂಚಿ ಕೂಡ ಆಗಲಿದೆ. ಜಿಪಂ ಕ್ಷೇತ್ರದಲ್ಲಿ ಗೆದ್ದ ಸದಸ್ಯರು ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಹಾಗಾಗಿ ಶಾಸಕ ಎಸ್ ಆರ್ ಶ್ರೀನಿವಾಸ್ ಮತ್ತು ಮಾಜಿ ಶಾಸಕ ಸುರೇಶ್ ಬಾಬು ಜಿಪಂಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಕೆಲಸ ಮಾಡದೇ ತಮ್ಮ ಬೆಂಬಲಿಗರನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ.
ಓದಿ: ನಾನು ಈ ರಾಜ್ಯದಲ್ಲಿ ಸ್ವತಂತ್ರ ಸಿಎಂ ಆಗಿರಲಿಲ್ಲ, ಒಬ್ಬ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೆ: ಹೆಚ್ಡಿಕೆ
ಆ ಮೂಲಕ ಮುಂದೆ ಕಾಂಗ್ರೆಸ್ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಈಗಿನಿಂದಲೇ ತಯಾರಿ ನಡೆಸುತಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ. ಪರಿಣಾಮ ಜಿಲ್ಲಾ ಜೆಡಿಎಸ್ನಲ್ಲಿ ಅತಂತ್ರ ಭಾವ ಮೂಡಿದ್ದು, ಜಿಲ್ಲಾ ಮುಖಂಡರು ವರಿಷ್ಠ ದೇವೇಗೌಡರ ಬಳಿ ತೆರಳಿ ಎಸ್ ಆರ್ ಶ್ರೀನಿವಾಸ್ ಹಾಗೂ ಸುರೇಶ್ ಬಾಬು ಅವರ ಮನವೊಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.