ತುಮಕೂರು: ತುಮಕೂರು ನಗರ ವಿಧಾನಸಭೆ ಕ್ಷೇತ್ರದಲ್ಲಿ ಈಗಿನಿಂದಲೇ ಚುನಾವಣಾ ಚಟುವಟಿಕೆ ರಂಗೇರುತ್ತಿದೆ ಅನಿಸುತ್ತಿದೆ. ಅಭ್ಯರ್ಥಿಯೊಬ್ಬರು ಆಣೆ ಪ್ರಮಾಣ ಮಾಡಿಸುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗುತ್ತಿದ್ದಾರೆ ಎಂಬ ಆರೋಪ ವಿರೋಧ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ಹಿಂದಿನ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿದ್ದ ಗೋವಿಂದರಾಜು, ಕೆಲವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದ್ದ ವಿಡಿಯೋವನ್ನು ವೈರಲ್ ಕೂಡಾ ಮಾಡಿದೆ. ಅಲ್ಲದೇ ಈ ಕುರಿತಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ವೈ ಎಸ್ ಪಾಟೀಲ್ ಅವರಿಗೆ ದೂರು ಸಹ ನೀಡಿದೆ.
ಚರ್ಚೆಗೆ ಗ್ರಾಸವಾದ ಆಣೆ ಪ್ರಮಾಣ:ತುಮಕೂರು ನಗರ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಗೋವಿಂದರಾಜು ಆಣೆ ಪ್ರಮಾಣದ ಮೂಲಕ ಮತ ಬೇಟೆಗೆ ಮುಂದಾಗಿದ್ದಾರೆ. ಇನ್ನೇನು ಅನೇಕ ತಿಂಗಳ ನಂತರ ಚುನಾವಣೆ ಬರಲಿದ್ದು, ತಮ್ಮ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಗೋವಿಂದರಾಜು ಅವರು, ತಮ್ಮ ಮತ ಕ್ಷೇತ್ರದ ಜನರನ್ನು ಬಸ್‌ನಲ್ಲಿ ಕರೆದೊಯ್ದು ಮಂಗಳವಾರ (ಡಿ.13ರಂದು ಹೆತ್ತೇನಹಳ್ಳಿ ಅಮ್ಮ) ಮಾರಮ್ಮ ದೇವಸ್ಥಾನಕ್ಕೆ ಕರೆದೊಯ್ದು ಆಣೆ ಪ್ರಮಾಣ ಮಾಡಿಸಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ತುಮಕೂರು ನಗರ ಬಿಜೆಪಿ ಘಟಕವು ಈ ಸಂಬಂಧ ವಿಡಿಯೊ ಹರಿಬಿಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಆಣೆ ಪ್ರಮಾಣದಂಥ ಆಮಿಷವನ್ನು ಕೂಡಲೇ ತಡೆಯಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತುಮಕೂರು ಬಿಜೆಪಿ ಯುವ ಘಟಕ ಮತ್ತು ನಗರ ಘಟಕ ಮುಖಂಡರು ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್‌ಗೆ ಮನವಿ ಮಾಡಿ ಆಗ್ರಹಿಸಿದ್ದಾರೆ.
ಇದನ್ನೂಓದಿ:ಈ ತಿಂಗಳಿಂದಲೇ ಚುನಾವಣಾ ಪ್ರಕ್ರಿಯೆಗಳು ಆರಂಭ: ದಿನೇಶ್ ಗುಂಡೂರಾವ್