ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಸಾವಿರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಜೆಡಿಎಸ್ ಅಭ್ಯರ್ಥಿ ಪರವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಪಕ್ಷದ ವತಿಯಿಂದ ಈಗಾಗಲೇ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನೇ ಕಣಕ್ಕಿಳಿಸಲು ಪಕ್ಷವು ನಿರ್ಧರಿಸಿದೆ. ಆದರೆ ಅವರು ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಉಮೇದುವಾರಿಕೆ ಸಲ್ಲಿಸಲು ಬಂದಿರಲಿಲ್ಲ. ಬದಲಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಶಿರಾ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮೂಲಕ ಮಿನಿವಿಧಾನಸೌಧದವರೆಗೂ ಆಗಮಿಸಿ, ಅಭ್ಯರ್ಥಿ ಪರವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ನೇತೃತ್ವದಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿತ್ತು. ಸುಮಾರು ಒಂದು ಕಿ.ಮೀ. ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಪಕ್ಷಪರ ಘೋಷಣೆಗಳನ್ನು ಕೂಗುತ್ತಾ ಪಕ್ಷಾಭಿಮಾನ ಮೆರೆದರು.
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪುತ್ರ ಸತ್ಯಪ್ರಕಾಶ್ ಅವರನ್ನು ಹೆಗಲ ಮೇಲೆ ಹೊತ್ತು ನಡೆದ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು. ಇನ್ನು ಮಿನಿ ವಿಧಾನಸೌಧದ ಬಳಿ ಜಮಾಯಿಸಿದ್ದ ಜೆಡಿಎಸ್ ಮುಖಂಡರು ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಎರಡು ಸೆಟ್ ನಾಮಪತ್ರಗಳನ್ನು ಉಪವಿಭಾಗಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ನಂದಿನಿದೇವಿ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಮಧುಗಿರಿ ಶಾಸಕ ವೀರಭದ್ರಯ್ಯ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು ಹಾಜರಿದ್ದರು.