ತುಮಕೂರು: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರೊಬ್ಬರು ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದೆ ನಿರಾಸಕ್ತಿ ತೋರಿದ ಆರೋಪದ ಮೇಲೆ ಜಯನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಹೆಚ್. ಮುತ್ತುರಾಜ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
2019ರ ನವೆಂಬರ್ 16ರಂದು ರಾತ್ರಿ 9 ಗಂಟೆಗೆ ಜ್ಯುವೆಲ್ಲರಿ ಬಾಗಿಲು ಹಾಕುವಾಗ ಕಳ್ಳರು ಗಮನವನ್ನು ಬೇರೆಡೆ ಸೆಳೆದು 25ರಿಂದ 30ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣವಿದ್ದ ಬ್ಯಾಗನ್ನು ದೋಚಿಕೊಂಡು ಪರಾರಿಯಾಗಿದ್ದರು. ನಗರದ ಶಿಲ್ಪ ಜ್ಯುವೆಲ್ಲರಿ ಅಂಗಡಿ ಮಾಲೀಕ ಟಿ.ಪಿ.ನಾಗರಾಜ್ ಎಂಬುವರು ನವೆಂಬರ್ 17ರಂದು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ನೀಡಿದ್ದ ವೇಳೆ ಸಬ್ ಇನ್ಸ್ಪೆಕ್ಟರ್ ಹೆಚ್. ಮುತ್ತುರಾಜ್ ದೂರನ್ನು ಸ್ವೀಕರಿಸಿದ್ದರು. ಆದ್ರೆ ಪ್ರಕರಣ ದಾಖಲಿಸಿರುವುದಿಲ್ಲವೆಂದು ಅರ್ಜಿಯಲ್ಲಿ ತಿಳಿಸಿದ್ದರು. ಹೀಗಾಗಿ 2020ರ ಜನವರಿ 29ರಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ ಅವರಿಗೆ ಟಿ.ಪಿ. ನಾಗರಾಜ್ ಈ ಕುರಿತಂತೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಪರಿಶೀಲಿಸಿದ ಜಿಲ್ಲಾ ಎಸ್ಪಿ ವಂಶಿ ಕೃಷ್ಣ ಅವರು, ಅರ್ಜಿದಾರರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ, ಪ್ರಕರಣವನ್ನು ದಾಖಲಿಸದೆ ನಿರಾಕರಿಸಿರುವುದು ಘೋರ ಪ್ರಕರಣವೆಂದು ತಿಳಿದಿದ್ದರೂ ಸಹ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅಮಾನತ್ತಿನಲ್ಲಿಡಲಾಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.