ತುಮಕೂರು: ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಲ್ಲಿ ನಡೆದ ಜನತಾ ದರ್ಶನ ಸಭೆಯಲ್ಲಿ, ಸಿದ್ಧತೆಯಿಲ್ಲದೇ ಸಭೆಗೆ ಆಗಮಿಸಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ತೀವ್ರ ಬರ ಪರಿಸ್ಥಿತಿ ನಿರ್ವಹಣೆಯ ಮಾಹಿತಿ ಕೇಳಿದ ಗೃಹ ಸಚಿವರಿಗೆ ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಲಿಲ್ಲ. ಇದರಿಂದ ಸಚಿವರು ಸಿಟ್ಟಾದರು.
ಕುಣಿಗಲ್ ತಾಲೂಕಿನಲ್ಲಿ 70 ಸಾವಿರ ನೋಂದಣಿ ಮಾಡಿದ ರೈತರಿದ್ದಾರೆ. ಕೇವಲ 600 ಜನ ರೈತರು ಮಾತ್ರ ಬೆಳೆ ವಿಮೆಗೆ ನೋಂದಣಿ ಮಾಡಿದ್ದಾರೆ. ಕಳೆದ ವರ್ಷ ಎಷ್ಟು ವಿಮೆ ನೀಡಿದ್ದೀರಾ ಎಂದು ಪ್ರಶ್ನಿಸಿದ ಪರಮೇಶ್ವರ್, ಮಾಹಿತಿ ನೀಡಲು ತಡಬಡಾಯಿಸಿದ ಅಧಿಕಾರಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ಉಪನಿರ್ದೇಶಕರಿಗೆ ಚಾಟಿ ಬೀಸಿದರು.
ಇದೇ ವೇಳೆ ಸಭೆಗೆ ಸಿದ್ಧತೆ ಇಲ್ಲದೆ ಕುಣಿಗಲ್ ತಹಶೀಲ್ದಾರ್ ವಿಶ್ವನಾಥ್ ಅವರಿಗೂ ಕ್ಲಾಸ್ ತೆಗೆದುಕೊಂಡರು. ಹಾಲಿಡೇಗೆ ಬಂದಂತೆ ಬಂದಿದ್ದೀರಾ. ಏನು ಅರೇಂಜ್‌ಮೆಂಟ್ ಮಾಡಿದ್ದೀಯಾ, ಏಯ್ ವಾಟ್ ನಾನ್ಸೆನ್ ಯು ಟಾಕಿಂಗ್ ಎಂದರು.
ಇನ್ನೊಂದೆಡೆ, ರೈತರೊಬ್ಬರು ನಮಗೆ ಹಣದ ಬದಲು 10 ಕೆಜಿ ಅಕ್ಕಿ ಕೊಡಿ ಎಂದು ಪ್ರಸ್ತಾಪ ಮಾಡಿದ್ದು ಸಾಕಷ್ಟು ಚರ್ಚೆಗೊಳಗಾಯಿತು. ಕೇವಲ ಮೂರು ಕೆಜಿ ಕೊಡ್ತಾರೆ, ಹೊಟ್ಟೆ ತುಂಬ ಅನ್ನ ಊಟ ಮಾಡೋಕೆ ಆಗ್ತಿಲ್ಲ. ದಯವಿಟ್ಟು ನಮಗೆ ಹಣದ ಬದಲು 10 ಕೆಜಿ ಅಕ್ಕಿ ಕೊಡಿ. ಇಲ್ಲದಿದ್ದರೆ ಹೊಟ್ಟೆ ಹಸಿವಿನಿಂದ ಇರಬೇಕಾಗುತ್ತೆ ಎಂದರು.
ಸಭೆಯಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂ. ಸಿಇಒ ಪ್ರಭು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಕೆಎಸ್ಆರ್ಟಿಸಿ ಬಸ್‌ನಲ್ಲಿ ಬಂದ ಡಿಸಿ ಸಿಇಒ ಅಧಿಕಾರಿಗಳು: ಜನತಾ ದರ್ಶನ ಸಭೆಗೆ ಸಾರಿಗೆ ಬಸ್‌ನಲ್ಲಿ ಬಂದ ತುಮಕೂರು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ವಿನೂತನ ನಡೆ ಪ್ರಶಂಸೆಗೆ ಪಾತ್ರವಾಯಿತು. ತುಮಕೂರು ಜಿಲ್ಲಾ ಕೇಂದ್ರದಿಂದ 70 ಕಿಲೋ ಮೀಟರ್ ದೂರವಿರುವ ಹುಲಿಯೂರುದುರ್ಗ ಪಟ್ಟಣದಲ್ಲಿ ಕುಣಿಗಲ್ ತಾಲೂಕು ಮಟ್ಟದ ಜನತಾ ದರ್ಶನ ಸಭೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ, ಜಿ.ಪಂ ಸಿಇಒ, ಡಿಎಫ್ಒ ಸೇರಿದಂತೆ 60 ಅಧಿಕಾರಿಗಳು ಕೆಎಸ್ಆರ್ಟಿಸಿ ಬಸ್‌ನಲ್ಲಿ ಬಂದಿದ್ದರು.