ತುಮಕೂರು: ಜಿಲ್ಲೆಯ ಬಂಧಿಖಾನೆಯಲ್ಲಿರುವ ಆರೋಪಿಗಳನ್ನು ನೋಡಲು ಬಂದವರಿಂದ ಜೈಲಿನ ಸಿಬ್ಬಂದಿ ಹಣ ಪಡೆಯುತ್ತಿರುವ ಎಂಬ ಆರೋಪ ಕೇಳಿ ಬಂದಿದ್ದು, ಇದರ ಕುರಿತಾಗಿ ಹಾಗೂ ಜಿಲ್ಲಾ ಕಾರಾಗೃಹದಲ್ಲಿನ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಆರೋಪಿಗಳ ಸಂಬಂಧಿಕರು ದೂರು ನೀಡಿದ್ದಾರೆ. ಜಿಲ್ಲಾಧಿಕಾರಿ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಎಡಿಜಿಪಿ, ಲೋಕಾಯುಕ್ತ, ಮಾನವಹಕ್ಕುಗಳ ಆಯೋಗ ಹಾಗೂ ಗೃಹಸಚಿವರಿಗೆ ಆರೋಪಿಗಳ ಸಂಬಂಧಿಕರು ದೂರು ನೀಡಿದ್ದಾರೆ. ನಾಲ್ಕೈದು ಪುಟಗಳಲ್ಲಿ ನೀಡಿದ ದೂರಿನಲ್ಲಿ ಬಂಧಿಖಾನೆ ಸಮಸ್ಯೆಗಳ ವಿಸ್ಕೃತ ವಿವರಣೆ ನೀಡಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ಬಂಧೀಖಾನೆಯ ಹಣ ಪೀಕುವ ಜೈಲಿನ ಸಿಬ್ಬಂದಿ ವಿರುದ್ಧ ವಿಚಾರಣಾಧೀನ ಕೈದಿಗಳ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಅಲ್ಲದೇ ತುಮಕೂರು ತಾಲೂಕಿನ ಊರುಕೆರೆ ಬಳಿಯಿರುವ ಜಿಲ್ಲಾ ಕಾರಾಗೃಹ, ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಸಮರ್ಪಕವಾಗಿ ಊಟ ನೀಡದ ಅಧೀಕ್ಷಕರ ವಿರುದ್ದ ಆರೋಪ ಕೇಳಿ ಬಂದಿದೆ.
ವಿಚಾರಣಾಧೀನ ಕೈದಿಗಳಿಂದ ಪ್ರತಿಭಟನೆ: ಹಿಂದಿನ ವಾರ ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದ ವಿಚಾರಣಾಧೀನ ಕೈದಿಗಳು. ಕಳಪೆ ಗುಣಮಟ್ಟದ ಆಹಾರ ಹಾಗೂ ಜೈಲಿನ ಅಕ್ರಮಗಳನ್ನು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಆ ದೂರಿನ ಆಧಾರದ ಮೇರೆಗೆ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಜೈಲರ ಅಧೀಕ್ಷಕಿ ಶಾಂತಶ್ರೀ ವಿರುದ್ದ ಆರೋಪಿಗಳ ಸಂಬಂಧಿಕರು ಅಸಮಾಧಾನದಿಂದ ದೂರು ನೀಡಿದ್ದರು.
ದೂರಿನಲ್ಲಿ ಏನೇನಿದೆ? ಇಲ್ಲಿಗೆ ಭೇಟಿ ನೀಡುವ ಎಲ್ಲ ಉನ್ನತ ಅಧಿಕಾರಿಗಳಿಗೆ ಮಾಸಿಕವಾಗಿ 1 ಲಕ್ಷ, 2 ಲಕ್ಷ ರೂ.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡುತ್ತಿದ್ದೇನೆ ಎಂದು ಅಧೀಕ್ಷಕಿ ಶಾಂತಶ್ರೀ ಎಂಬ ಹೇಳಿದ್ದು, ಅಷ್ಟೇ ಅಲ್ಲದೆ ನೀವು ಯಾವುದೇ ದೂರು ನೀಡಿದರೂ ಏನೇನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲ ಅಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ ಲಂಚ ಪಡೆಯಲು ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ.
ಯಾರಾದರೂ ದೂರು ನೀಡುವ ಸಾಹಸ ಮಾಡಿದರೇ ಬಾಲಬಿಚ್ಚಿದರೆ ಅಂತಹವರ ಮನೆ ಮಠ ಮಾರಿಸುತ್ತೇನೆ. ಹೆಂಡತಿ ಮಕ್ಕಳನ್ನು ಅಡಮಾನ ಇರಿಸುತ್ತೇನೆ ಎಂದು ಜೈಲು ಅಧೀಕ್ಷಕಿ ಶಾಂತಶ್ರೀ ಅವಾಜ್ ಹಾಕಿದ್ದರಂತೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ನಿಮ್ಮ ಪರವಾಗಿ ಯಾರಾದರು ದೂರ ಸಲ್ಲಿಸಿದ್ದಾರೆ, ನಿಮ್ಮನ್ನೂ ಸಾಯುವವರೆಗೂ ಜೈಲಿನಲ್ಲೇ ಕೊಳೆಯವಂತೆ ಮಾಡುತ್ತೇನೆ ಎಂದು ಕೈದಿಗಳಿಗೆ ಬೆದರಿಕೆ ಹಾಕಿರುವ ಕುರಿತಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಕೈದಿಗಳ ದೂರು ನೀಡಿದ್ದಾರೆ.
ಇದರೊಂದಿಗೆ ಕೈದಿ ಬಂಧಿಗಳಿಗೆ ಸರಬರಾಜು ಆಗುವ ವಿವಿಧ ಆಹಾರ ಪದಾರ್ಥಗಳು ಜೈಲು ಅಧೀಕ್ಷಕಿ ಮನೆ ಸೇರುತ್ತಿದ್ದು, ಅವರು ಇವುಗಳನ್ನೇ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ವಿಚಾರಣಾಧೀನ ಬಂಧಿಗಳನ್ನು ಜೈಲು ಅಧೀಕ್ಷಕಿ ಅವರು ತಮ್ಮ ಮನೆಗೆಲಸಕ್ಕಾಗಿ ಬಟ್ಟೆ ಒಗೆಯುವುದು, ಶೌಚಾಲಯ ತೊಳೆಯುವುದಕ್ಕೆ, ನೆಲ ಒರೆಸುವುದಕ್ಕೆ, ಪಾತ್ರೆ ತೊಳೆಯುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ದೂರು ಸೇರುತ್ತಿದ್ದಂತೆ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡಿ ಬಂಧಿಖಾನೆಯ ಪರಿಶೀಲನೆ ಮಾಡಿ ಕೈದಿಗಳ ಹೇಳಿಕೆಗಳನ್ನು ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ, ಪರಿಶೀಲನೆ ನಡೆಸಿ ಕಾರಾಗೃಹದಲ್ಲಿ ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಯಾ ಎಂಬ ಪ್ರಶ್ನೆ ವ್ಯಕ್ತವಾಗಿದೆ.
ಇದನ್ನೂಓದಿ:ಮಾರಕಾಸ್ತ್ರಗಳಿಂದ ಯುವತಿ ಬರ್ಬರ ಹತ್ಯೆ: ನಾಪತ್ತೆಯಾಗಿದ್ದ ಆರೋಪಿ ಶವವಾಗಿ ಪತ್ತೆ