ತುಮಕೂರು: ಜಿಲ್ಲೆಯ ಕುಣಿಗಲ್, ಗುಬ್ಬಿ ಹಾಗೂ ತುಮಕೂರು ತಾಲೂಕಿನ ಗಡಿ ಭಾಗದಲ್ಲಿ ಮಿತಿ ಮೀರಿರುವ ಚಿರತೆ ಹಾವಳಿಯಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಇನ್ನೊಂದೆಡೆ ಅರಣ್ಯ ಇಲಾಖೆ ಸಹ ಚಿರತೆಗಳನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿದೆ. ಇದರ ನಡುವೆ ಅರಣ್ಯ ಇಲಾಖೆಯು ಚಿರತೆ ದಾಳಿಯಿಂದ ಪಾರಾಗಲು ಗ್ರಾಮಸ್ಥರಿಗೆ ಜಾಕೆಟ್ ವಿತರಣೆ ಮಾಡಲಾಗುತ್ತಿದೆ.
ಗ್ರಾಮದ ವಯೋವೃದ್ಧರು, ಮಕ್ಕಳು, ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು, ದನ ಕುರಿಗಳನ್ನು ಮೇಯಿಸುವವರಿಗೆ ಕೇಸರಿ ಹಾಗೂ ರೇಡಿಯಮ್ ಮಿಶ್ರಿತ ಜಾಕೆಟ್ಗಳನ್ನು ನೀಡುತ್ತಿದ್ದಾರೆ. ಗ್ರಾಮಸ್ಥರು ಇಂತಹ ಜಾಕೆಟ್ಗಳನ್ನು ಧರಿಸಿಕೊಂಡು ನಿತ್ಯ ತಮ್ಮ ಕೆಲಸಗಳಲ್ಲಿ ತೊಡಗಬೇಕಿದೆ. ಮಕ್ಕಳು ಶಾಲೆಗೆ ಹೋಗುವಾಗ ಹಾಗೂ ಗ್ರಾಮದಲ್ಲಿ ಓಡಾಡುವ ಸಂದರ್ಭದಲ್ಲಿಯೂ ಈ ಜಾಕೆಟ್ಗಳನ್ನು ಧರಿಸುವಂತೆ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಮನವಿ ಮಾಡುತ್ತಿದೆ.
ಈ ಸುದ್ದಿಯನ್ನೂ ಓದಿ: ಚಾಲಾಕಿ ಚಿರತೆಗಳನ್ನು ಸೆರೆಹಿಡಿಯಲು ವಿಶೇಷ ಬೋನ್ : ಅರಣ್ಯಾಧಿಕಾರಿಗಳ ಮಾಸ್ಟರ್ ಪ್ಲಾನ್
ತುಮಕೂರು ತಾಲೂಕಿನ ಬನ್ನಿಕುಪ್ಪೆ, ಕೋಣನಕುಂಟೆ, ಬೈಚೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜಾಕೆಟ್ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಸಾವಿರದ ಐನೂರು ಜಾಕೆಟ್ಗಳನ್ನು ವಿತರಿಸಲಾಗಿದೆ. ಚಿರತೆಗಳು ಹಿಂಬದಿಯಿಂದ ಜನರ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಇಂತಹ ಜಾಕೆಟ್ಗಳನ್ನು ಕಂಡು ರೇಡಿಯಂ ಬೆಳಕಿನಿಂದ ಚಿರತೆಗಳು ವಿಚಲಿತವಾಗಲಿವೆ. ಇದರಿಂದ ಜನರು ತಕ್ಷಣ ಚಿರತೆ ದಾಳಿ ಮಾಡುವಂತಹ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಪಾರಾಗಬಹುದಾಗಿದೆ.
ಒಟ್ಟಾರೆ, ಚಿರತೆ ಹಾವಳಿ ನಿಯಂತ್ರಣಕ್ಕೆ ತುಮಕೂರು ಜಿಲ್ಲಾ ಅರಣ್ಯ ಇಲಾಖೆ ಹರಸಾಹಸ ಪಡುತ್ತಿದ್ದು, ಈ ವಿನೂತನ ಮಾರ್ಗೋಪಾಯ ಸಹಕಾರಿಯಾಗಲಿದೆಯೇ ಎಂಬುದನ್ನು ನಿರೀಕ್ಷಿಸಬೇಕಿದೆ.