ತುಮಕೂರು: ಕುಪ್ಪೂರು ಗದ್ದಿಗೆ ಮಠದ ಯತೀಶ್ವರಾನಂದ ಸ್ವಾಮೀಜಿ ಕೊರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟಿರುವ ಕುರಿತು ಸಂಪೂರ್ಣ ತನಿಖೆ ಆಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಮಾಧುಸ್ವಾಮಿ, ಸ್ವಾಮೀಜಿ ಮೃತಪಡುವ ಮುನ್ನ 5 ರಿಂದ 6 ದಿನಗಳ ಕಾಲ ಚಿಕ್ಕನಾಯಕನಹಳ್ಳಿಯಲ್ಲಿರುವ ಸಾಯಿ ಗಂಗಾ ಕ್ಲಿನಿಕ್ಗೆ ತೆರಳಿ ಚಿಕಿತ್ಸೆ ಪಡೆದು ಮಠಕ್ಕೆ ವಾಪಸ್ ಆಗಿದ್ದರು. ಈ ಬಗ್ಗೆ ತನಿಖೆ ಆಗಬೇಕು. ಇದನ್ನು ಇನ್ನಷ್ಟು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಖಾಸಗಿ ಕ್ಲಿನಿಕ್ ಹಾಗೂ ನರ್ಸಿಂಗ್ ಹೋಮ್ಗಳಲ್ಲಿನ ವೈದ್ಯರುಗಳ ಇಂತಹ ನಿರ್ಲಕ್ಷತನ ಸಹಿಸಲು ಸಾಧ್ಯವೇ ಇಲ್ಲ. ನಾವು ಎಂದೂ ಕೂಡ ಕೊರೊನಾ ಸೋಂಕು ಸಂಪೂರ್ಣ ಮುಕ್ತವಾಗಿದೆ ಎಂದು ಹೇಳಿಲ್ಲ. 2ನೇ ಅಲೆಯ ಕೊರೊನಾ ಸೋಂಕು ಇನ್ನೂ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಸೋಂಕಿನ ಲಕ್ಷಣಗಳನ್ನು ಹೊಂದಿರುವ ಜನರ ದೇಹದಲ್ಲಿನ ಪರೀಕ್ಷೆಗಳನ್ನು ಸ್ಥಗಿತಗೊಳಿಸಿಲ್ಲ. ಈ ನಡುವೆ ಖಾಸಗಿ ವೈದ್ಯರ ಇಂತಹ ನಿರ್ಲಕ್ಷ್ಯತನದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕು ವೈದ್ಯಾಧಿಕಾರಿ ಕೂಡ ಸ್ವಾಮೀಜಿಯವರಿಗೆ ಕೊರೊನಾ ಪರೀಕ್ಷೆ ನಡೆಸುವಂತೆ ತಿಳಿಸಿದ್ದರು. ಆದರೆ, ಸ್ವಾಮೀಜಿಯವರು ನಾವು ಸಾಯಿ ಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ, ನಮಗೆ ಯಾವುದೇ ಸೋಂಕು ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು ಎಂದು ತಿಳಿಸಿದ್ದಾರೆ. ಹೀಗಾಗಿ, ಸಾಯಿ ಗಂಗಾ ಆಸ್ಪತ್ರೆಯ ವೈದ್ಯರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಕುಪ್ಪೂರು ಗದ್ದಿಗೆ ಮಠದ ಸ್ವಾಮೀಜಿ ಅವರೊಂದಿಗೆ ಒಡನಾಟ ಹೊಂದಿದ್ದಂತಹ ಮಠದಲ್ಲಿನ ಇಬ್ಬರಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ, ಮಠದಲ್ಲಿ ಅನೇಕ ಜನರು ಸೋಂಕಿನ ಗುಣಲಕ್ಷಣ ಹೊಂದಿದ್ದಾರೆ. ಇದೀಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಇಷ್ಟರಮಟ್ಟಿಗೆ ವ್ಯಾಪಿಸಲು ವೈದ್ಯರು ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ಸ್ವಾಮೀಜಿಯವರಿಗೆ ಸೂಚಿಸದೆ ಇರುವುದು ಕೂಡ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ, ಸಾಯಿ ಗಂಗಾ ಆಸ್ಪತ್ರೆಯ ವೈದ್ಯರಿಗೆ ನೋಟಿಸ್ ಜಾರಿ ಮಾಡಿ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಯ ವೈದ್ಯರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಇದನ್ನೂ ಓದಿ: ಕುಪ್ಪೂರು ಗದ್ದುಗೆ ಮಠದ ಶ್ರೀಗಳಿಗೆ ಕೋವಿಡ್ ಸೋಂಕು ಇರುವುದು ಪತ್ತೆ ಹಚ್ಚದ ವೈದ್ಯರಿಗೆ ನೋಟಿಸ್