ತುಮಕೂರು: ಬಡವರಿಗೆ ಅನುಕೂಲವಾಗಲೆಂದು ಪಿ ಎಸ್ ಟ್ರಸ್ಟ್ ವತಿಯಿಂದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿ ಮೈತ್ರಾ ದೇವಿ ಯಡಿಯೂರಪ್ಪ ಹೆಸರಿನಲ್ಲಿ ಮಂಗಳ ಭವನ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆ ಜಾಗ ನೀಡಿದೆ. ಸರ್ಕಾರದ ಸಹಕಾರದಿಂದ ಭವನ ನಿರ್ಮಾಣವಾಗಿದೆ. ನವೆಂಬರ್ 13 ರಂದು ನಮ್ಮ ತಾಯಿಯ ಹೆಸರಿನಲ್ಲಿ ಮಂಗಳ ಭವನ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.
ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಯಡಿಯೂರಪ್ಪ ಅವರ ಅಧ್ಯಕ್ಷತೆ, ಸಚಿವ ಆರಗ ಜ್ಞಾನೇಂದ್ರ, ಸಚಿವ ಮಾಧುಸ್ವಾಮಿ, ಸಂಸದ ಬಿ ವೈ ರಾಘವೇಂದ್ರ, ಸಂಸದ ಬಿ ಕೆ ಸುರೇಶ್, ಕುಣಿಗಲ್ ಶಾಸಕರಾದ ರಂಗನಾಥ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪೊಲೀಸರ ವಯೋಮಿತಿ ಹೆಚ್ಚಳ ವಿಚಾರ: ಸಾಕಷ್ಟು ದಿನಗಳಿಂದ ಈ ಬೇಡಿಕೆ ಬರುತ್ತಿದೆ. ಬೇರೆ ರಾಜ್ಯಗಳನ್ನು ಹೋಲಿಸಿಕೊಂಡು ಬೇಡಿಕೆ ಬರುತ್ತಿದೆ. ನನ್ನ ಹಾಗೂ ಮುಖ್ಯಮಂತ್ರಿಗಳನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ. ನಾನು ಕೂಡ ಸಹಾನುಭೂತಿಯಿಂದ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಈ ಕುರಿತು ಯುವ ಆಕಾಂಕ್ಷಿಗಳು ಆತಂಕದಲ್ಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಕ್ರಿಯೆ ತಡವಾಗಿದೆ. ಅದನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ: ಬೆಳೆಯಬಾರದು ಎಂಬ ಕುತಂತ್ರಕ್ಕೆ ತಕ್ಕ ಉತ್ತರ ಎಲ್ಲಿ ಕೊಡಬೇಕು ಅಂತ ಗೊತ್ತಿದೆ: ವಿಜಯೇಂದ್ರ ಎದಿರೇಟು