ತುಮಕೂರು : ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಕೆ ಎನ್ ರಾಜಣ್ಣ ಹೇಳಿದ್ದಾರೆ. ಅದಕ್ಕೆ ನಾನು ಆಭಾರಿ ಆಗಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ತಿಳಿಸಿದ್ದಾರೆ. ತುಮಕೂರಿನಲ್ಲಿ ಪೊಲೀಸ್ ಇಲಾಖೆ ವಸತಿಗೃಹಗಳ ಸಮುಚ್ಛಯ ಕಟ್ಟಡವನ್ನು ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆ ಪಡ್ತೀನಿ. ಆ ಅದೃಷ್ಟ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕೆ ಆಗಲ್ಲ. ತುಮಕೂರಿನವರು ಅಲ್ವಾ ನೀವು. ನಮಗೆ ಒಳ್ಳೆದಾಗಬೇಕು ಅಂದ್ರೆ. ನನಗೆ ಸಪೊರ್ಟ್ ಮಾಡಿ ಎಂದು ಮಾಧ್ಯಮದವರಿಗೆ ಹೇಳಿದರು.
ಪರಮೇಶ್ವರ್ ಮನೆಯಲ್ಲಿ ಸಿಎಂ ಊಟದ ನೆಪದಲ್ಲಿ ಸಭೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಮನೆಯಲ್ಲಿ ಯಾವುದೇ ತರಹದ ಚರ್ಚೆ ಆಗಿಲ್ಲ. ಬಹಳಷ್ಟು ಅರ್ಹರು ಇದ್ದಾರೆ. ಎಲ್ಲರೂ ಒಂದೊಂದು ಚಾನ್ಸ್ ತೆಗೆದುಕೊಳ್ಳಲಿ ಬಿಡಿ ಎಂದರು. ಪೊಲೀಸ್ ಇಲಾಖೆಯಲ್ಲಿ ಕನಿಷ್ಠ 70ರಷ್ಟು ಸಿಬ್ಬಂದಿಗೆ ವಸತಿ ಒದಗಿಸಲು ತೀರ್ಮಾನ ಮಾಡಿದ್ದೇವೆ. ಕಠಿಣ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಾರೆ. ಹೀಗಾಗಿ ಅವರ ಕುಟುಂಬಗಳು ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದೇವೆ ಎಂದರು.
ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಇದಕ್ಕೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ. ಹಾಗಾಗಿ ತುಮಕೂರಿನಲ್ಲಿ 72 ವಸತಿಗೃಹಗಳನ್ನ ಉದ್ಘಾಟನೆ ಮಾಡಿದ್ದೇವೆ. ಔರದ್ಕಾರ್ ವರದಿಯನ್ನ ಸಂಪೂರ್ಣವಾಗಿ ಅನುಷ್ಠಾನ ಮಾಡಿಲ್ಲ. ಮತ್ತೆ ಮರುಪರಿಶೀಲನೆ ಮಾಡಬೇಕು ಅಂತ ಯೋಚನೆ ಮಾಡಿದ್ದೇವೆ. ಇಲ್ಲಿಯವರೆಗೆ ಕೆಲವು ಅಂಶಗಳನ್ನ ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಮುಖ್ಯವಾದ ಕೆಲ ಅಂಶಗಳನ್ನ ಪರಿಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಮತ್ತೆ ಪುನರ್ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆಗೆ ಹಾಗೂ ಪರಮೇಶ್ವರ್ಗೆ ನಾಚಿಕೆ ಆಗಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರು ಹೇಳುವ ಹಾಗೆ ಈಶ್ವರಪ್ಪಗೆ ಮೆದುಳು ಹಾಗೆ ನಾಲಿಗೆಗೆ ಲಿಂಕ್ ತಪ್ಪಿದೆ. ನಾನು ಅದನ್ನೆ ಹೇಳ್ತಿನಿ ಎಂದರು.
ಪರಮೇಶ್ವರ್ಗೆ ಸಿಎಂ ಆಗೋ ಅದೃಷ್ಟವಿದೆ : ಜಿ ಪರಮೇಶ್ವರ್ಗೆ ಸಿಎಂ ಆಗುವ ಅವಕಾಶವಿದೆ. ಈಗ ಪರಮೇಶ್ವರ್ ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದ್ರೂ ಆಗಬಹುದು ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದರು. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಹಾಗೂ ಪೊಲೀಸ್ ಇಲಾಖೆಯ ಸಮುಚ್ಚಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಡಾಕ್ಟರೇ ನಿಮಗೆ ಅದೃಷ್ಟವಿದೆ ಸಿಎಂ ಆಗಿ ಅಧಿಕಾರ ನಡೆಸುತ್ತೀರಿ ಎಂದು ಹಿಂದೊಮ್ಮೆ ಹೇಳಿದ್ದೆ. ಏಕೆಂದರೆ ಅವರಿಗೆ ಅದೃಷ್ಟ ಇದೆ ಅಂತಾ ನಾನು ಭಾವಿಸಿದ್ದೇನೆ. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗ್ತಾರೆ ಅಂದ್ರೆ ನಾವೆಲ್ಲಾ ಸಂತೋಷ ಪಡುತ್ತೇವೆ. ನಾವೆಲ್ಲಾ ಮುಖ್ಯಮಂತ್ರಿ ಆದಂತೆ ಭಾವಿಸುತ್ತೇನೆ ಎಂದಿದ್ದರು.
ಇದನ್ನೂ ಓದಿ: ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು.. ಪರಮೇಶ್ವರ್ಗೆ ಸಿಎಂ ಆಗೋ ಅದೃಷ್ಟವಿದೆ: ಸಚಿವ ರಾಜಣ್ಣ