ತುಮಕೂರು: ಕಳೆದ ವರ್ಷಾರಂಭದಲ್ಲಿ ವಕ್ಕರಿಸಿದ್ದ ಕೊರೊನಾ ಇಡೀ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತ್ತು. ಕೋವಿಡ್ ಪ್ರಕರಣಗಳ ಪ್ರಮಾಣ ಇಳಿಕೆ ಕಂಡು ಇನ್ನೇನು ಎಲ್ಲವೂ ಸುಧಾರಿಕೊಳ್ಳುತ್ತಿದೆ ಅನ್ನುವಷ್ಟರಲ್ಲಿ ಕೋವಿಡ್ 2ನೇ ಅಲೆಗೆ ಸಿಲುಕಿಕೊಂಡಿದ್ದೇವೆ. ಹಾಗಾಗಿ ಎಲ್ಲೆಡೆ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ತೆರೆದು ವರದಿಗನುಗುಣವಾಗಿ ನಿಯಮಗಳನ್ನು ಮಾರ್ಪಡಿಸಲಾಗುತ್ತಿದೆ.
ಕೋವಿಡ್ ಟೆಸ್ಟಿಂಗ್ ಸೆಂಟರ್:
ಸೋಂಕಿತರನ್ನು ಪತ್ತೆ ಹಚ್ಚಲು ಈಗಾಗಲೇ ಜಿಲ್ಲೆಯಲ್ಲಿ ಎರಡು ಕಡೆಗಳಲ್ಲಿ ಆರ್ಟಿಪಿಸಿಆರ್ ಟೆಸ್ಟಿಂಗ್ ಸೆಂಟರ್ಗಳನ್ನು ತೆರೆಯಲಾಗಿದೆ. ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಟೆಸ್ಟಿಂಗ್ ಸೆಂಟರ್ ಅನ್ನು ತೆರೆಯಲಾಗಿದ್ದು, ಸಾರ್ವಜನಿಕರು ಸರತಿ ನಿಂತು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಕೊರೊನಾ ಸೋಂಕಿತರ ಪ್ರಮಾಣ ಶೇಕಡಾ 6 ರಿಂದ 7ರಷ್ಟು ಹೆಚ್ಚಾಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಸಿದೆ.
ಕೋವಿಡ್ ಪರೀಕ್ಷಾ ಪ್ರಕ್ರಿಯೆ:
ಸರ್ಕಾರಿ ಪರೀಕ್ಷಾ ಕೇಂದ್ರಗಳಿಗೆ ಬರುವ ಜನರನ್ನು ಮೊದಲಿಗೆ ಹಂತ ಹಂತವಾಗಿ ವೈದ್ಯರು ಪರೀಕ್ಷೆಗಳನ್ನು ನಡೆಸಿ ಅವರ ಗಂಟಲು ದ್ರವವನ್ನು ಸಂಗ್ರಹಿಸುತ್ತಾರೆ. ನಂತರ ಅದನ್ನು ಆರ್ಟಿಪಿಸಿಆರ್ ಕೇಂದ್ರಕ್ಕೆ ರವಾನಿಸಲಾಗುತ್ತದೆ.
ಸಿಬ್ಬಂದಿ ಕೊರತೆಯಿಲ್ಲ:
ಈ ಪರೀಕ್ಷಾ ಕೇಂದ್ರಕ್ಕೆ ಈಗಾಗಲೇ 40 ಮಂದಿ ವೈದ್ಯರು ಮತ್ತು ವೈದ್ಯಕೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಜಿಲ್ಲಾಸ್ಪತ್ರೆಯಲ್ಲಿರುವ 35 ಮಂದಿ ವೈದ್ಯರು ಕೂಡ ನಿರಂತರವಾಗಿ ಹಗಲು - ರಾತ್ರಿ ಎನ್ನದೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಪೈಕಿ 7 ಮಂದಿ ಫಿಸಿಷಿಯನ್ಗಳು ಕೂಡ 24x7 ಅವಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 5 ಮಂದಿ ಅನಸ್ತೇಶಿಯನ್ಗಳು ಕೂಡ ಐಸಿಯುನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಾಳೆಯಿಂದ ರಾಜ್ಯದ 8 ನಗರಗಳಲ್ಲಿ ಕೊರೊನಾ ಕರ್ಫ್ಯೂ... ನೂತನ ಮಾರ್ಗಸೂಚಿ ಪ್ರಕಟ
ತಿಪಟೂರಿನಲ್ಲಿಯೂ ಕೋವಿಡ್ ಪರೀಕ್ಷಾ ಘಟಕವನ್ನು ತೆರೆಯಲಾಗಿದ್ದು, ಪೂರಕವಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇನ್ನು ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಹೆಚ್ಚುವರಿಯಾಗಿ ಸಿಬ್ಬಂದಿಯ ಅವಶ್ಯಕತೆ ಇದ್ದರೆ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು ತಿಳಿಸಿದ್ದಾರೆ.