ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯ ಗ್ರಾಮದ ಬಳಿ ಹಾದು ಹೋಗಿರುವ ರಸ್ತೆಯಲ್ಲಿ ನಿರಂತರವಾಗಿ ಸಂಭವಿಸುತ್ತಿದ್ದ ಅಪಘಾತಗಳ ತಡೆಗೆ ಗ್ರಾಮಸ್ಥರು ವಿಶೇಷ 'ಭೈರವ ಭೂತ ಹೋಮ’ ನಡೆಸಿದರು.
ಮಧುಗಿರಿಯ ದಂಡಿನಮಾರಮ್ಮ ದೇಗುಲದ ಅರ್ಚಕರಾದ ನಾಗಲಿಂಗಾಚಾರ್ ನೇತೃತ್ವದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಅಪಘಾತಗಳು ನಡೆಯುತ್ತಿದ್ದ ಪ್ರತಿ 10 ಮೀಟರ್ಗೆ ರಸ್ತೆಯ ಎಲ್ಲಾ ದಿಕ್ಕುಗಳಲ್ಲೂ ನಿಂಬೆ ಹಣ್ಣು, ಮೊಸರನ್ನ, ಅರಿಶಿಣ ಕುಂಕುಮ, ಬೇವಿನ ಸೊಪ್ಪನ್ನು ಹಾಕಲಾಯಿತು. ತೆಂಗಿನಕಾಯಿ ಒಡೆದು ನಿಂಬೆಹಣ್ಣು ತುಂಡು ಮಾಡಿ, ಶಾಂತಿ ಹೋಮ ನೆರವೇರಿಸಲಾಯಿತು. ತುಮಕೂರು-ಕೊರಟಗೆರೆ-ಪಾವಗಡ ಮಾಗಱದ ರಸ್ತೆಯಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಕಡಿವಾಣ ಬೀಳಬೇಕು ಎಂದು ಆಶಿಸಿ ಹೋಮ-ಹವನಾದಿಗಳನ್ನು ಗ್ರಾಮಸ್ಥರು ನೆರವೇರಿಸಿದರು.
ಕೆರೆಗಳಪಾಳ್ಯ ಸುತ್ತಮುತ್ತಲ ಗ್ರಾಮಗಳಾದ ವಸಂತಯ್ಯನರೊಪ್ಪ, ಕವಾಡಿಗರಪಾಳ್ಯದ ಗ್ರಾಮಸ್ಥರು ಹೋಮ ಹವನದಲ್ಲಿ ಪಾಲ್ಗೊಂಡಿದ್ದರು. ಕೈವಾಡದವರ ಡೋಲು-ತಮಟೆ ವಾದ್ಯ ನುಡಿಸಿದರು. ಸುತ್ತಮುತ್ತ ಇರುವ ಆಂಜನೇಯ, ಈಶ್ವರ, ಗುರಿಕಲ್ಲು, ಮರಿಯಮ್ಮ, ಶನಿಮಹಾತ್ಮ ಹಾಗೂ ಶೆಟ್ಟಿಹಳ್ಳಿ ಮಾರಮ್ಮನ ದೇವಿಗೆ ಪೂಜಾದಿಗಳನ್ನು ನೆರವೇರಿಸಲಾಯಿತು.
ನಿರಂತರವಾಗಿ 48 ಗಂಟೆಗಳ ಕಾಲ ಬಸ್ ತಂಗುದಾಣದಲ್ಲಿ ಭೈರವ ಭೂತ ಹೋಮ ಮಾಡಲಾಯಿತು. ಇತ್ತೀಚಿನ ಒಂದು ತಿಂಗಳ ಅವಧಿಯಲ್ಲಿ ಈ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲೇ ಸುಮಾರು 11 ಅಪಘಾತಗಳು ನಡೆದಿವೆ. ಅಲ್ಲದೆ ಒಂಭತ್ತು ಮಂದಿ ಮೃತಪಟ್ಟಿದ್ದಾರೆ. ರಸ್ತೆಯಲ್ಲಿ ಓಡಾಡುವರ ಸುರಕ್ಷತೆಗೆ ಹಾಗೂ ಎಲ್ಲಾ ವಾಹನಗಳ ಚಾಲಕರ ಒಳಿತಿಗಾಗಿ ಭೈರವ ಭೂತ ಹೋಮ ನೆರವೇರಿಸಿರುವುದಾಗಿ ಹೇಳುತ್ತಾರೆ ಅರ್ಚಕ ನಾಗಲಿಂಗಾಚಾರ್.