ತುಮಕೂರು: "ದೇವೇಗೌಡರ ಸಾವು ಬಯಸಿದ್ದವರಿಗೆ ತಕ್ಕ ಪಾಠ ಕಲಿಸಬೇಕು. ಈ ಮೂಲಕ ದೇವೇಗೌಡರ ಹೆಸರು ಉಳಿಸಬೇಕಾಗಿದೆ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ವಿರುದ್ಧ ಕಿಡಿಕಾರಿದರು.
ಜಿಲ್ಲೆಯ ಮಧುಗಿರಿಯಲ್ಲಿಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೊಂಡವಾಡಿ ಚಂದ್ರಶೇಖರ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "ದೇವೇಗೌಡರ ಆಶೀರ್ವಾದದಿಂದ ಗೆದ್ದ ರಾಜಣ್ಣ, ಈಗ ದೇವೇಗೌಡರ ಸಾವನ್ನು ಬಯಸಿದ್ದಾರೆ. ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ಕುತಂತ್ರದ ರಾಜಕಾರಣದಿಂದ ತುಮಕೂರಿನಲ್ಲಿ ಸೋತರು. ಆ ನೋವಿನಿಂದ ಮಾನಸಿಕವಾಗಿ ಕುಗ್ಗಿ ಇವತ್ತು ಆರೋಗ್ಯ ತಪ್ಪಿದ್ದಾರೆ. ಅವರು ಇನ್ನೂ ನಮ್ಮ ಜೊತೆ ಜೀವಂತವಾಗಿ ಇರಬೇಕಾದರೆ, ತುಮಕೂರಿನಲ್ಲಿ 11 ಕ್ಕೆ 11 ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಗೆಲ್ಲಬೇಕು. ತುಮಕೂರು ಜಿಲ್ಲೆಯ ಜನತೆ ಈ ಕೆಲಸ ಮಾಡಬೇಕು" ಎಂದು ಮನವಿ ಮಾಡಿದರು.
ಕೆ.ಎನ್. ರಾಜಣ್ಣ ವಿರುದ್ಧ ಆಕ್ರೋಶಕ್ಕೇನು ಕಾರಣ?: 2022ರ ಜುಲೈ 1 ರಂದು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎನ್.ರಾಜಣ್ಣ ಮಾತನಾಡುತ್ತಾ, ದೇವೇಗೌಡರು ಇಬ್ಬರ ಭುಜದ ಮೇಲೆ ಕೈ ಹಾಕಿ ನಡೆದಾಡುವ ರೀತಿಯನ್ನು ತೋರಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಆರ್‌ಎಸ್‌ಎಸ್, ಹಿಂದೂ ಮಹಾಸಭಾದಿಂದ ಬಿಜೆಪಿ ನಿಯಂತ್ರಣ: ಸಿದ್ದರಾಮಯ್ಯ