ತುಮಕೂರು : ಜಿಲ್ಲೆಯ 11 ಕ್ಷೇತ್ರಗಳ ಪೈಕಿ 11 ಕ್ಷೇತ್ರದಲ್ಲೂ ಜೆಡಿಎಸ್ ಗೆಲ್ಲುತ್ತೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಪರವಾಗಿ ಮತ ಬೇಟೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಹಾಗೂ ನಾಯಕರ ದಂಡು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಜೆಡಿಎಸ್ ಪಕ್ಷ ನಿಮ್ಮಿಂದ ಕಟ್ಟಿರೋದು. ರೈತರ, ಬಡವರ ಪರವಾಗಿ ನಿಂತಿರೋದು. ನಿಮ್ಮಗಳ ಶ್ರಮ, ಆಶೀರ್ವಾದಗಳಿಂದ ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರಿಗೆ ನೆಮ್ಮದಿ ಬದುಕು ಕಟ್ಟಿಕೊಡಲು. ನಮ್ಮ ಪಕ್ಷ ಮುಂದಾಗಿದೆ ಎಂದರು.
ಇದನ್ನು ಈಗಾಗಲೇ ಜನತೆ ಮುಂದೆ ಮಂಡನೆ ಮಾಡಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಜೆಡಿಎಸ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಈ ಪಕ್ಷಗಳು ಭ್ರಷ್ಟಾಚಾರದ ಪಕ್ಷಗಳು, ಪ್ರಧಾನ ಮಂತ್ರಿಗಳು ಹೇಳ್ತಾರೆ.. ಜೆಡಿಎಸ್ಗೆ ಮತ ಕೊಟ್ರೆ ಅದು ಕಾಂಗ್ರೆಸ್ಗೆ ಕೊಟ್ಟ ಹಾಗೆ ಅಂತಾರೆ. ಅದೇ ಕಾಂಗ್ರೆಸ್ ಪಕ್ಷದವರು ಹೇಳ್ತಾರೆ ಜೆಡಿಎಸ್ ಪಕ್ಷಕ್ಕೆ ಮತ ಕೊಡಬೇಡಿ, ಬಿಜೆಪಿಗೆ ಕೊಟ್ಟ ಹಾಗೆ ಅಂತಾರೆ. ನಾನು ಆ ಮಹಾನುಭವರಿಗೆ ಹೇಳೋದು ಇಷ್ಟೇ. ಇದು ಬಡವರ, ರೈತರ ಪರ ನಿಂತಿರೋ ಪಕ್ಷ. ಯಾರ ಪರ ಅಲ್ಲ. ದರ್ಪ, ದುರಾಡಾಳಿತ, ದುರಹಂಕಾರಿ ವ್ಯಕ್ತಿ ಬಿಜೆಪಿ ಅಭ್ಯರ್ಥಿ. ಆ ವ್ಯಕ್ತಿಯನ್ನ ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆ ಶಾಶ್ವತವಾಗಿ ಮನೆಗೆ ಕಳುಹಿಸಬೇಕು. ಹೆಸರು ಹೇಳದೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡಗೆ ಮತ ಹಾಕ್ಬೇಡಿ ಎಂದು ಹೇಳಿದ್ರು.
ಸಮೀಕ್ಷೆಗಳಿಗೆ ಗಾಬರಿಯಾಗ್ಬೇಡಿ: ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸುವ ಕೆಲಸ ಮಾಡಬೇಕು. ಎಲ್ಲಾ ಭಾಗದಲ್ಲೂ ಈ ಬಾರಿ ನಿಮ್ಮ ಪಕ್ಷಕ್ಕೆ ಮತ ಕೊಡ್ತಿನಿ ಅಂತ ಹೇಳಿ ಆಶೀರ್ವಾದ ಮಾಡ್ತಿದ್ದಾರೆ. ಇವಾಗ ಬರುತ್ತಿರುವ ಸಮೀಕ್ಷೆಗಳಿಗೆ ಗಾಬರಿಯಾಗ್ಬೇಡಿ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬರೋದು ಗ್ಯಾರಂಟಿ. ಅದನ್ನ ತಪ್ಪಿಸೋಕೆ ಯಾರ ಕೈಯಲ್ಲೂ ಆಗಲ್ಲ. ಜನ ಬೆಂಬಲವೇ ನನಗೆ ಆಸ್ತಿ. ನಾನು ನಿಮ್ಮಲ್ಲಿ ಮನವಿ ಮಾಡೋದು ಇಷ್ಟೆ. ಈ ನನ್ನ ತಮ್ಮನನ್ನು ಗೆಲ್ಲಿಸಿಕೊಡಿ. ನೀವು ಯಾವುದೇ ಆಮಿಷಗಳಿಗೆ ಒಳಗಾಗದೇ ಗೌರಿಶಂಕರ್ ಅವರನ್ನ ಗೆಲ್ಲಿಸಿ ಎಂದು ಹೆಚ್ಡಿಕೆ ಕರೆ ನೀಡಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಈ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ. ಗೌರಿಶಂಕರ್ ಅವರಿಗೆ ಆಸೀರ್ವಾದ ಮಾಡಿ ಗೆಲ್ಲಿಸಿ. ಗೌರಿಶಂಕರ್ ಅವರನ್ನ ಸಚಿವರನ್ನಾಗಿ ಮಾಡ್ತಿನಿ. ಬಿಜೆಪಿ ಅಭ್ಯರ್ಥಿಯಂತು ಈ ಬಾರಿ ಸಚಿವರಾಗಲ್ಲ. ದಯವಿಟ್ಟು ಗೌರಿಶಂಕರ್ಗೆ ಮತ ನೀಡಿ ಸಚಿವರನ್ನಾಗಿ ಮಾಡಿ. ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ. ನಿಮ್ಮ ಸೇವೆಗೆ ನಾನು ಬದ್ಧನಾಗಿರುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸ್ಥಾನ ಜೆಡಿಎಸ್ ಅಭ್ಯರ್ಥಿ ಗೆಲ್ತಿದ್ದಾರೆ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬರೋದು ಗ್ಯಾರಂಟಿ ಎಂದು ಹೇಳಿದರು.
ಮಾಗಡಿ ತಾಲೂಕಿನ ಕುದೂರಿನಲ್ಲಿ ರೋಡ್ ಶೋ : ಇನ್ನೊಂದೆಡೆ ಚುನಾವಣೆ ಪ್ರಕಟಗೊಂಡ ಬಳಿಕ 45 ಕಡೆ ಸಭೆ ನಡೆಸಿದ್ದೇನೆ. ಇಂದು ಹಲವು ಕಡೆ ಚುನಾವಣಾ ಪ್ರಚಾರಕ್ಕೆ ತೆರಳಬೇಕಿದೆ. ಮಂಗಳೂರಿಗೂ ತೆರಳಬೇಕಿದೆ ಅಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ಸೂಚನೆ ಇದೆ. ಮಾಗಡಿ ಕ್ಷೇತ್ರದ ಜನರ ನಮ್ಮನ್ನು ಮನೆಮಗನಂತೆ ನೋಡಿದ್ದಾರೆ. ಈ ಬಾರಿ ನಮ್ಮ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಗಡಿ ರಂಗನಾಥ ಸ್ವಾಮಿಗೆ ಬಿಡುತ್ತೇನೆ: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನಲ್ಲಿ ರೋಡ್ ಶೋ ನಡೆಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ರಾಮನಗರ, ಚನ್ನಪಟ್ಟಣ, ಮಾಗಡಿಯ ಜನರು ಪ್ರೀತಿಯಿಂದ ಕಂಡಿದ್ದಾರೆ. ರಾಮನಗರ ಜಿಲ್ಲೆಯ ಜನರ ಆಶೀರ್ವಾದ ನನ್ನ ಮೇಲಿದೆ. ನನ್ನ ಹಳೆಯ ಸ್ನೇಹಿತ ಏನೇನೋ ಹೇಳ್ತಾರೆ, ನನ್ನ ಬಣ್ಣ ಸೇರಿದಂತೆ ಏನೇನೋ ವಿಷಯ ಹೇಳುತ್ತಾರೆ. ಏಕವಚನದಲ್ಲಿ ನನ್ನ ಹಾಗೂ ದೇವೇಗೌಡರ ಬಗ್ಗೆ ಮಾತಾಡುವ ಅವರಿಗೆ ಉತ್ತರ ನೀಡೋ ಅವಶ್ಯಕತೆ ಇಲ್ಲ. ಅಂತಿಮವಾಗಿ ಮಾಗಡಿ ರಂಗನಾಥ ಸ್ವಾಮಿಗೆ ಬಿಡುತ್ತೇನೆ ಎಂದರು.
ನಾನು ಅವರನ್ನು ಯಾವ ರೀತಿ ನಡೆಸಿಕೊಂಡಿದ್ದೇನೆ. ಈ ವ್ಯಕ್ತಿ ಬಗ್ಗೆ ಚರ್ಚೆ ಮಾಡೋದು ಅನವಶ್ಯಕವಾಗಿದೆ. ದೇವರ ಅನುಗ್ರಹದಿಂದ 2 ಬಾರಿ ಸಿಎಂ ಆಗಿದ್ದೇನೆ. ಅವರಿಂದ ಏನೋ ನಾನು ಮುಖ್ಯಮಂತ್ರಿ ಆಗಿದ್ದಲ್ಲ. ಅವರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಮಾಗಡಿ ರಂಗನಾಥ ನೋಡಿಕೊಳ್ಳುತ್ತಾನೆ. ಈ ಹಿಂದೆ ಕಳ್ಳಬಿಲ್ ವಿಚಾರದಲ್ಲಿ ಅವರ ಸ್ನೇಹಿತರು ಇದ್ದರು. ಹೀಗಾಗಿ ಆ ವಿಷಯ ಚರ್ಚೆ ಮಾಡಬೇಡಿ ಎಂದು ಕೇಳಿದ್ದರು. ಈ ಕ್ಷೇತ್ರದ ಜನರು ನನ್ನನ್ನು ಸಿಎಂ ಮಾಡಿದ್ದು ಎಂದು ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಹೆಸರು ಹೇಳದೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಇದನ್ನೂ ಓದಿ : ಕಾಂಗ್ರೆಸ್ ಭದ್ರಕೋಟೆ ಶಾಂತಿನಗರ.. ಹ್ಯಾರಿಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ, ಜೆಡಿಎಸ್ ರಣತಂತ್ರ