ಬೆಂಗಳೂರು:ತುಮಕೂರಿನ ಜೆಡಿಎಸ್‌ನಲ್ಲಿ ಕೆಲವರು ಪಕ್ಷ ಬಿಡುವ ವಿಚಾರದಲ್ಲಿ ತುಮಕೂರು ಭಾಗದ ಶಾಸಕರು, ಮುಖಂಡರ ಜೊತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸಭೆ ನಡೆಸಿದರು.
ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿಯ ಜೆಪಿ ಭವನದಲ್ಲಿ ದೇವೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತುಮಕೂರು ಭಾಗದ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಪಾಲ್ಗೊಂಡಿದ್ದರು. ತುಮಕೂರು ಜೆಡಿಎಸ್‌ನಲ್ಲಿ ಉಂಟಾಗಿರುವ ಭಿನ್ನಮತ ಶಮನ ಮಾಡುವ ಬಗ್ಗೆ ಚರ್ಚೆ ನಡೆಯಿತು. ಸಭೆ ನಂತರ ಮಾತನಾಡಿದ ಗುಬ್ಬಿ ಶಾಸಕ ಶ್ರೀನಿವಾಸ್, ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಆಯ್ತು. ನನಗೆ ಯಾವುದೇ ಅಸಮಾಧಾನ ಇಲ್ಲ. ಡಿ ಕೆ ಶಿವಕುಮಾರ್ ಅರೆಸ್ಟ್ ಆದಾಗ ಸಮಾಜ ಹೋರಾಟಕ್ಕೆ ಕರೆ ಕೊಟ್ಟಿತ್ತು. ಸಮಾಜ ಕರೆ ಕೊಟ್ರು ಕುಮಾರಸ್ವಾಮಿ ಹೋರಾಟಕ್ಕೆ ಬಂದಿಲ್ಲ ಅಂತಾ ಹೇಳಿದ್ದೆ ಅಷ್ಟೇ. ಬೇರೆ ಅಸಮಾಧಾನ ಇಲ್ಲ. ಈವರೆಗೂ ಪಕ್ಷ ಬಿಟ್ಟು ನಾನು ಹೋಗ್ತೀನಿ ಅಂತಾ ಎಲ್ಲೂ ಹೇಳಿಲ್ಲ. ಯಾರ ಮೇಲೂ ವ್ಯಕ್ತಿಗತವಾಗಿ ಕೋಪ ಇಲ್ಲ ಎಂದು ಹೇಳಿದರು.
ಬೇಜಾರಾಗಿದ್ದು ನಿಜ: ಇತ್ತೀಚಿನ ರಾಜಕೀಯ ವಿಚಾರಗಳಿಂದ ಸ್ವಲ್ಪ ಬೇಜಾರಾಗಿದೆ. ಜೆಡಿಎಸ್‌ನಿಂದ ನನಗೆ ಬಿ ಫಾರಂ ಕೊಟ್ಟಿದ್ದಾರೆ. ಆ ಬಿ ಫಾರಂ ಅವಧಿ ಇನ್ನೂ ನಾಲ್ಕು ವರ್ಷ ಕಾಲ ಇದೆ. ನಾನು ಅಲ್ಲಿವರೆಗೂ ಎಲ್ಲೂ ಹೋಗಲ್ಲ ಎಂದು ಕುಮಾರಸ್ವಾಮಿಯವರಿಗೆ ಮಾತು ಕೊಟ್ಟಿದ್ದೇನೆ. ಹಾಗಾಗಿ ಪಕ್ಷದಲ್ಲೇ ಇರುತ್ತೇನೆ ಎಂದರು. ನಾಲ್ಕು ವರ್ಷ ಆದ ಮೇಲೆ ಜೆಡಿಎಸ್ನಲ್ಲೇ ಇರ್ತೀರಾ ಎಂಬ ಪ್ರಶ್ನೆಗೆ, ಗೊತ್ತಿಲ್ಲ ಎಂದ ಶ್ರೀನಿವಾಸ್, ನಾಲ್ಕು ವರ್ಷ ನಂತರ ಪಕ್ಷ ಬಿಡುವ ಸುಳಿವು ನೀಡಿದರು. ಇವತ್ತಿನ ರಾಜಕೀಯ ವಿದ್ಯಮಾನಗಳಿಂದ ಮನಸ್ಸಿಗೆ ನೋವಾಗಿದೆ. ನನ್ನ ಜೀವನ ಇರೋವರೆಗೂ ಬಿಜೆಪಿ ಪಕ್ಷ ಸೇರೋದಿಲ್ಲ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಪಕ್ಷೇತರವಾಗಿ ಹಿಂದೆ ಗೆದ್ದವನು. ಯಾರಿಂದಲೂ ಹಣಕ್ಕೆ ಆಸೆ ಪಟ್ಟವನು ಅಲ್ಲ ಎಂದರು.
ಇವತ್ತಿನ ರಾಜಕೀಯ ವ್ಯವಸ್ಥೆ ಬಗ್ಗೆ ನೋವಾಗಿದೆ. ಹೀಗಾಗಿ ಎಲೆಕ್ಷನ್ ಮತ್ತೆ ನಿಲ್ಲಬೇಕಾ ಬೇಡವಾ ಅಂತಾ ಯೋಚನೆ ಮಾಡ್ತಿದ್ದೆ ಅಷ್ಟೇ. ಬೇರೆ ಯಾರು ಪಕ್ಷ ಬಿಡ್ತಾರೋ ಗೊತ್ತಿಲ್ಲ. ಬೇರೆಯವರು ಪಕ್ಷ ಬಿಡೋ ಬಗ್ಗೆ ನನಗೆ ಗೊತ್ತಿಲ್ಲ. ನಾನು ಸರ್ಕಾರ ಬಿದ್ದ ಮೇಲೆ ಯಾರ ಜೊತೆಯೂ ಮಾತಾಡಿಲ್ಲ. ಸರ್ಕಾರ ಬಿದ್ದ ಮೇಲೆ ಊರಿಗೆ ಹೋದವನು ಇವತ್ತು ಬಂದಿದ್ದೇನೆ ಎಂದರು.
ಅನರ್ಹರ ಅವಸ್ಥೆ ವಿಚಾರ ಮಾತನಾಡಿ, ಅವ್ರ ಬಗ್ಗೆ ನಾವು ಹೇಳೋ ಮೊದಲು ನಮಗೆ ನೈತಿಕತೆ ಇದೆಯಾ ನೋಡಿಕೊಳ್ಳಬೇಕು. ಅಧಿಕಾರಕ್ಕಾಗಿ ಇಂತಹ ವ್ಯವಸ್ಥೆಗೆ ಹೋಗಿದ್ದೇವೆ. ಜನ ಛೀ...ಥೂ ಅನ್ನೋ ಸ್ಥಿತಿಯಾಗಿದೆ. ಜನರೇ ಉಗಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಜನರಿಗೆ ಒಳ್ಳೆ ಕೆಲಸ ಮಾಡುವ ಕೆಲಸ ಆಗಬೇಕು. ನಮ್ಮ ಜವಾಬ್ದಾರಿ ಬಗ್ಗೆ ನಮಗೆ ಅರಿವಿರಬೇಕು. ಅನರ್ಹರಿಗೆ ಜನರೇ ಪಾಠ ಕಲಿಸಬೇಕು. ಯಾಕೆ ಅವ್ರು ಹೋದ್ರು ಯಾವ ಸಿದ್ದಾಂತದಿಂದ ಹೋದ್ರೋ ಅಥವಾ ಮುಂದೇಯಾದ್ರೂ ಅವರೇ ಹೇಳಬೇಕು ಎಂದರು.
ವಿಶ್ವನಾಥ್ ಅಂತಹವರೇ ಈ ರೀತಿ ರಾಜಕಾರಣ ಮಾಡಿದರೆ ಹೇಗೆ? ಅವ್ರನ್ನ ನೋಡಿ ರಾಜಕಾರಣ ಮಾಡ್ತಿದ್ದವರು ನಾವು. ಈಗ ಅವ್ರೇ ಹೀಗೆ ಮಾಡಿದ್ರೆ ನಾವು ಏನ್ ಮಾಡಬೇಕು. ಅನರ್ಹ ಶಾಸಕರ ಭವಿಷ್ಯದ ಬಗ್ಗೆ ಮಾತನಾಡಿದ ಅವರು, ಇವತ್ತಿನ ರಾಜಕೀಯ ಹದಗೆಟ್ಟಿದೆ. ವಿಶ್ವನಾಥ್ ಅಂದ್ರೆ ನಮಗೆ ವಿಶ್ವಾಸ ಇತ್ತು. ವಿಶ್ವನಾಥ್ ಅವ್ರೇ ಇಂತಹ ಕೆಲಸ ಮಾಡ್ತಾರೆ ಅಂದ್ರೆ ರಾಜಕಾರಣ ಹೇಗೆ? ಎಂದರು.