ತುಮಕೂರು: ಜೆಡಿಎಸ್ ಪಕ್ಷದಲ್ಲಿ ನನಗೆ ಗೌರವ ಕೊಡುತ್ತಿಲ್ಲ ಎಂದ ಮೇಲೆ ಇಲ್ಲಿರುವುದು ಒಳಿತಲ್ಲ ಎಂಬುದು ನನ್ನ ಭಾವನೆ ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್ಆರ್ ಶ್ರೀನಿವಾಸ ಅಸಮಾಧಾನ ಹೊರಹಾಕಿದ್ದು, ಪಕ್ಷ ತ್ಯಜಿಸುವ ಮುನ್ಸೂಚನೆ ನೀಡಿದ್ದಾರೆ.
ಗುಬ್ಬಿ ಪಟ್ಟಣದ ಅಮಾನಿಕೆರೆ ತುಂಬಿದ ಹಿನ್ನೆಲೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಪಕ್ಷದ ವರಿಷ್ಠರ ಜೊತೆಯಲ್ಲಿ ನಾನೇ ಮಾತುಕತೆಗೆ ಮುಂದಾದರೂ ಸಹ ಅವರಿಗೆ ಇಷ್ಟವಿಲ್ಲ ಎಂದ ಮೇಲೆ ನನಗೆ ಅದರ ಅವಶ್ಯಕತೆ ಇಲ್ಲ. ನಾನು ಕಾಂಗ್ರೆಸ್ಗೆ ಹೋಗುತ್ತೇನೋ ಬಿಜೆಪಿಗೆ ಹೋಗುತ್ತೇನೋ ಎಂಬ ಚಿಂತನೆ ಮಾಡಿಲ್ಲ ಎಂದರು.
2004 ರಿಂದಲೂ ನನ್ನ ಕಾರ್ಯಕರ್ತರು ನನ್ನ ಜೊತೆಯಲ್ಲಿದ್ದರೆ ಯಾವುದೇ ಗೊಂದಲವಿಲ್ಲ ಜೆಡಿಎಸ್ ಬಿಟ್ಟು ಹೊರ ಹೋಗಿರುವ ಮೂರು ಕಾರ್ಯಕರ್ತರು ಮಾತ್ರ ಸಮಾವೇಶಕ್ಕಾಗಿ ಓಡಾಡುತ್ತಿರುವುದು ಬಿಟ್ಟರೆ ಬೇರೆ ಯಾರೂ ಕೂಡ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ ಎಂದರು.
ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಹಾಗೂ ನಾನು ಇಬ್ಬರೂ ಸೇರಿಯೇ ಸಂಘಟನೆ ಮಾಡಬೇಕು ಎಂದುಕೊಂಡಿದ್ದೇವೆ ಹಾಗೂ ತುರುವೇಕೆರೆಯಲ್ಲಿ ಡ್ಯಾಮೇಜ್ ಆಗುತ್ತದೆ ಎಂದು ಸಹ ವರಿಷ್ಠರಿಗೆ ತಿಳಿಸಿದ್ದೇನೆ. ಆದರೆ, ನಮ್ಮ ನಾಯಕರು ನಮ್ಮಿಬ್ಬರನ್ನು ಹೊರಗೆ ಕಳುಹಿಸುತ್ತಿದ್ದಾರೆ. ಹಾಗಾಗಿ ಹೋದರೆ ಕಾಂತರಾಜು ಹಾಗೂ ನಾನು ಜೊತೆಯಲ್ಲಿ ಹೋಗುತ್ತೇವೆ. ನಾವು ಮಾತ್ರ ಅಲ್ಲ ಪಕ್ಷದ ಸಾಕಷ್ಟು ಜನ ಇವರ ನಡವಳಿಕೆಯಿಂದ ಬೇಸತ್ತು ಪಕ್ಷವನ್ನು ಬಿಡಲು ನಿರ್ಧರಿಸಿದ್ದಾರೆ ಎಂದು ವಿವರಿಸಿದ್ದಾರೆ.