ತುಮಕೂರು: ಕಳೆದ ಎರಡು ವರ್ಷಗಳಿಂದ ವೇತನ ನೀಡದೇ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಪಂ ಸಿಬ್ಬಂದಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ವಳ್ಳುರು ಗ್ರಾಮ ಪಂಚಾಯಿತಿ ಎದುರು ನಡೆದಿದೆ.
ಓದಿ: ಊಟ ಮಾಡುವಾಗ ಗಂಟಲಲ್ಲೇ ಸಿಲುಕಿದ ಆಹಾರ : ಅಸ್ವಸ್ಥಗೊಂಡು ವ್ಯಕ್ತಿ ಸಾವು
ಸಿಬ್ಬಂದಿ ಧನಂಜಯ, ಹನುಮಂತ, ಬಾಬು ಎಂಬುವರು ತಮ್ಮ ಕುಟುಂಬ ಸಮೇತ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ಕೆಲಸ ಮಾಡುವ ಸಿಬ್ಬಂದಿ, ವೇತನ ಕೇಳಲು ಹೋದರೆ ಸತಾಯಿಸುತ್ತಲೇ ಇದ್ದಾರೆ. ಅನೇಕ ಬಾರಿ ಗ್ರಾಮ ಪಂಚಾಯಿತಿಯ ಮುಂದಿನ ಸಭೆಯಲ್ಲಿ ಈ ಕುರಿತು ನಿರ್ಣಯ ಮಾಡಿ ವೇತನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡುತ್ತಿದ್ದಾರೆ.
ಹೀಗಾಗಿ ಪ್ರಸ್ತುತ ವೇತನವಿಲ್ಲದೇ ಬದುಕು ನಡೆಸಲು ದುಸ್ತರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಅಧಿಕಾರಿ, ಶೀಘ್ರದಲ್ಲಿ ವೇತನ ಬಿಡುಗಡೆ ಮಾಡುವ ಕುರಿತಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಸಿಬ್ಬಂದಿ ಪ್ರತಿಭಟನೆ ಹಿಂದಕ್ಕೆ ಪಡೆದರು.