ತುಮಕೂರು: ಉತ್ತರಪ್ರದೇಶದ ಹಥ್ರಾಸ್ನಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಯುವತಿಗೆ ನ್ಯಾಯ ಸಿಗುವವರೆಗೂ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ನಡೆದಿರುವ ಅತ್ಯಾಚಾರ ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.
ಕಾನೂನಿನ ಪ್ರಕಾರ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಪೊಲೀಸರು ಯುವತಿಯ ಮೃತದೇಹವನ್ನ ಪೋಷಕರಿಗೆ ನೀಡಬೇಕಿತ್ತು. ಆದರೆ, ಪೊಲೀಸರು ತರಾತುರಿ ಅಂತ್ಯ ಸಂಸ್ಕಾರ ನಡೆಸಿ ಸಾಕ್ಷ್ಯನಾಶ ಮಾಡಿದ್ದಾರೆ ಅಂದ್ರೆ, ಇದಕ್ಕಿಂತ ಅವಮಾನವೀಯ ಘಟನೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನ ಹಿರಿಯ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಅತ್ಯಾಚಾರಕ್ಕೊಳಗಾದ ಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗುತಿದ್ದಾಗ ಪೊಲೀಸರು ತಡೆದು ನಿಲ್ಲಿಸಿ ದೌರ್ಜನ್ಯವೆಸಗಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಬಿಜೆಪಿಯ ವಿರುದ್ಧ ಧ್ವನಿ ಎತ್ತುವವರನ್ನು ಬಂಧಿಸುವ ಕಾರ್ಯ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.
ಮಧ್ಯರಾತ್ರಿ 12ಗಂಟೆಗೆ ಒಬ್ಬ ಹೆಣ್ಣು ಮಗಳು ರಸ್ತೆಯಲ್ಲಿ ನಿರ್ಭಯದಿಂದ ನಡೆದುಕೊಂಡು ಹೋದ್ರೆ ಅಂದು ನಮಗೆ ಸ್ವಾತಂತ್ರ್ಯ ಎಂದು ಗಾಂಧೀಜಿಯವರು ಹೇಳಿದ್ದಾರೆ. ಅಂತಹ ಗಾಂಧೀಜಿಯವರ ನಾಡಿನಲ್ಲೇ ಈ ರೀತಿಯ ಅತ್ಯಾಚಾರಗಳು ನಡೆಯುತ್ತಿರುವುದು ಖೇದಕರ. ನಾವು ಈ ಘಟನೆಯನ್ನು ಇಲ್ಲಿಗೆ ಬಿಡುವುದಿಲ್ಲ. ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಯುವತಿಗೆ ನ್ಯಾಯ ದೊರೆಯುವವರೆಗೂ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.