ತುಮಕೂರು : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ದೇವಾಲಯಕ್ಕೆ ಪ್ರತಿಯೊಬ್ಬ ಹಿಂದೂ ಸಮಾಜದವರಿಂದ ನಿಧಿ ಸಂಗ್ರಹಿಸಿ ಆ ಹಣದಿಂದ ದೇವಾಲಯದ ನಿರ್ಮಾಣವಾಗಬೇಕು ಎಂಬುದು ಶ್ರೀರಾಮ ಜನ್ಮಭೂಮಿ ಟ್ರಸ್ಟಿನ ಉದ್ದೇಶವಾಗಿದೆ.
ಈ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಜನವರಿ 15ರಂದು ಕರ್ನಾಟಕದಲ್ಲಿ ವಿವಿಧ ಮಠಾಧೀಶರಿಂದ ಚಾಲನೆ ದೊರೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜು ತಿಳಿಸಿದರು.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ.
ದೇವಾಲಯ ನಿರ್ಮಾಣ ಕಾರ್ಯಕ್ಕೆ ಹಿಂದೂ ಸಮಾಜದ ಪ್ರತಿಯೊಬ್ಬರಿಂದ ನಿಧಿ ಸಂಗ್ರಹಿಸಿ ಆ ಹಣದಿಂದ ದೇವಾಲಯ ನಿರ್ಮಾಣವಾಗಬೇಕು ಎಂಬುದು ಈ ಟ್ರಸ್ಟಿನ ಉದ್ದೇಶ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ತಿಗೆ ನೀಡಿದೆ ಎಂದು ತಿಳಿಸಿದರು.
ದೇಶದಲ್ಲಿರುವ ಸುಮಾರು 4 ಲಕ್ಷ ಗ್ರಾಮಗಳನ್ನು ಸಂಪರ್ಕಿಸಿ, 25 ರಿಂದ 26 ಕೋಟಿ ಮನೆಗಳ ಪೈಕಿ 11 ಕೋಟಿ ಮನೆಗಳನ್ನು ಭೇಟಿ ಮಾಡಿ ಪ್ರತಿಯೊಬ್ಬರಿಂದಲೂ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಕಾರ್ಯ ಮಾಡಲಾಗುವುದು. ಈ ಕಾರ್ಯಕ್ಕೆ ಕರ್ನಾಟಕದಾದ್ಯಂತ ಜನವರಿ 15 ರಂದು ಚಾಲನೆ ದೊರೆಯಲಿದೆ.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಧರ್ಮಸ್ಥಳ ಕ್ಷೇತ್ರದ ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಗೂ ವಿವಿಧ ಮಠದ ಮಠಾಧೀಶರು ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು. ಜನವರಿ 15ರಿಂದ ಪ್ರಾರಂಭವಾಗಲಿರುವ ನಿಧಿ ಸಂಗ್ರಹಣಾ ಕಾರ್ಯ ಫೆಬ್ರವರಿ ಐದನೇ ತಾರೀಖಿನವರೆಗೂ ನಡೆಯಲಿದೆ ಎಂದು ತಿಳಿಸಿದರು.