ತುಮಕೂರು: ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದ ಪ್ರತ್ಯೇಕ ಎರಡು ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದ ಘಟನೆ ತಿಪಟೂರು ತಾಲೂಕಿನ ಕರಡಾಳು ಗ್ರಾಮದ ಬಳಿ ನಡೆದಿದೆ. ಶಾಂತನಹಳ್ಳಿ ಗ್ರಾಮದ ಸದಾಶಿವಯ್ಯ (62) ಮೃತ ದುರ್ದೈವಿಯಾಗಿದ್ದಾರೆ.
ನಿನ್ನೆ ರಾತ್ರಿ ಕರಡಾಳು ಗ್ರಾಮದಿಂದ ನೊಣವಿನಕೆರೆ ಗ್ರಾಮದ ಕಡೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ನೊಣವಿನಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಬೈಕ್ ಡಿವೈಡರ್ ಡಿಕ್ಕಿ- ಸ್ಥಳದಲ್ಲೆ ಸವಾರ ಸಾವು: ಬೈಕೊಂದು ಡಿವೈಡರ್ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಕುಣಿಗಲ್ ತಾಲೂಕಿನ ನಾಗೇಗೌಡನ ಪಾಳ್ಯದಲ್ಲಿ ನಡೆದಿದೆ. ಹಾಸನ ತಾಲೂಕಿನ ಚೌಡನಕುಪ್ಪೆ ಗ್ರಾಮದ ಯುವಕ ವರ್ಷದ ಅಭಿಷೇಕ್ (23) ಮೃತಪಟ್ಟ ದುರ್ದೈವಿ. ಟಿವಿಎಸ್ ಎಕ್ಸೆಲ್ನಲ್ಲಿ ಮನೆಗೆ ತೆರಳುತ್ತಿದ್ದಾಗ ನಾಗೇಗೌಡನ ಪಾಳ್ಯದ ಕಾಮತ್ ಹೊಟೇಲ್ ಬಳಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಯುವಕ ಅಸುನೀಗಿದ್ದಾನೆ. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವಾಹನ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೇ ಸಾವು: ತುಮಕೂರು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಟಾಟಾ ಶೋ ರೂಂ ಮುಂಭಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಪುನೀತ್ ಕುಮಾರ್ (28) ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ. ಮೃತಪಟ್ಟ ವ್ಯಕ್ತಿ ಬೇಗೂರು ಮೂಲದವನಾಗಿದ್ದು, ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆ ಸಿಪಿಐ ಗುರುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಅಪಘಾತ ವರದಿ: ಚಲಿಸುತ್ತಿದ್ದ ಲಾರಿಯ ಟಯರ್ ಬ್ಲಾಸ್ಟ್ ಆಗಿ ಎರಡು ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಚಾಲಕ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಕ್ರಾಸ್ ಬಳಿ ನಡೆದಿದೆ. ರಾಜಸ್ಥಾನ ಮೂಲದ ಪ್ರಭುಲಾಲ್ ಗುಜ್ಜಲ್ ಮೃತಪಟ್ಟಿರುವ ದುರ್ದೈವಿ ಚಾಲಕ. ಅಲ್ಲದೇ ಘಟನೆಯಲ್ಲಿ ಮತ್ತೋರ್ವ ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಸ್ಥಾನದಿಂದ ಗದ್ದನಕೇರಿ ಕ್ರಾಸ್ ಮೂಲಕ ಹುಬ್ಬಳ್ಳಿಗೆ ಹೊರಟ್ಟಿದ್ದ ಲಾರಿಯ ಹಿಂಬದಿ ಟಯರ್ ಬ್ಲಾಸ್ಟ್ ಆಗಿದೆ. ಎದುರಿಗೆ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಬರುತ್ತಿದ್ದ ಲಾರಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಟಯರ್ ಬ್ಲಾಸ್ಟ್ ಆದ ಲಾರಿಯ ಚಾಲಕ ಸುಟ್ಟ ಗಾಯಗಳಾಗಿ ಮೃತಪಟ್ಟಿದ್ದಾನೆ. ಇನ್ನೊಬ್ಬ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎರಡು ಲಾರಿಗಳ ಮುಂಭಾಗ ಡಿಕ್ಕಿ ಹೊಡೆದ ರಭಸಕ್ಕೆ ನಜ್ಜು ಗುಜ್ಜಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಯಾತ್ರಿಕರ ಬಸ್-ಟ್ರಕ್ ಭೀಕರ ಅಪಘಾತ: 10ಕ್ಕೂ ಹೆಚ್ಚು ಮಂದಿ ಭಕ್ತರು ಸಾವು!